ನ್ಯೂಸ್

ಸಖತ್​ ಐಡಿಯಾ ಗುರು| ಕೃಷಿ, ಆರೋಗ್ಯ ಉಪಕರಣಗಳ ನಿರ್ಯಾತ ಆರಂಭಿಸಿ...

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಕೃಷಿ, ಆರೋಗ್ಯ ಉಪಕರಣಗಳ ನಿರ್ಯಾತ ಆರಂಭಿಸಿ...

ಕರೊನಾದಿಂದಾಗಿ ಈಗ ಜಗತ್ತಿನ ಎಲ್ಲೆಡೆ ಆರೋಗ್ಯ ಮತ್ತು ಕೃಷಿ ಸಂಬಂಧಿ ವಸ್ತುಗಳಿಗೆ ಬೇಡಿಕೆ ಜಾಸ್ತಿ ಇದೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ಗಮನ ಹರಿಸಿದರೆ ಉತ್ತಮ ಲಾಭ ಪಡೆಯಬಹುದು. ಅದಲ್ಲದೆ ರಾಜ್ಯದಿಂದ ಈಗಾಗಲೇ ಸಿದ್ಧ ಆಹಾರ, ಬಟ್ಟೆ ಹೀಗೆ ಹಲವು ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿವೆ. ಯಾವ ದೇಶದಲ್ಲಿ ಯಾವ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂಬ ಮಾಹಿತಿ ಅಂತರ್ಜಾಲದಲ್ಲಿ ಮತ್ತು ಎಫ್​ಕೆಸಿಸಿಐ, ಕಾಸಿಯಾದಂತಹ ಸಂಸ್ಥೆಗಳಲ್ಲಿ ಸುಲಭವಾಗಿ ಸಿಗುತ್ತದೆ. ಆ ಮೂಲಕ ವಿದೇಶಿ ಸಂಸ್ಥೆಗಳ ಜತೆ ಸಂಪರ್ಕ ಸಾಧಿಸಿ ಮಾರುಕಟ್ಟೆ ಸಂಪಾದಿಸಬಹುದು. ರಫ್ತು ಉದ್ದೇಶಿತ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆ ಆರಂಭಿಸಲು ಖಾಸಗಿ ಬ್ಯಾಂಕ್​ಗಳು ಶೇ. 7.5ರಿಂದ ಶೇ. 8.5ರ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ರಫ್ತು ಮಾಡುವ ವಸ್ತುಗಳಿಗೆ ವಿಮೆಯೂ ಸಿಗುತ್ತದೆ. ವಿಮಾನ, ಹಡಗುಗಳಲ್ಲಿ ವಿದೇಶಕ್ಕೆ ಕಳುಹಿಸುವಾಗ ವಸ್ತುಗಳು ಹಾಳಾದರೆ, ವಿಮೆ ಪರಿಹಾರ ದೊರೆಯುತ್ತದೆ. ಹೀಗಾಗಿ ರಫ್ತಿನ ಬಗ್ಗೆ ಯಾವುದೇ ಭಯ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ವ್ಯವಹಾರ ಸರಿಯಾಗಿದ್ದರೆ, ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿದ್ದರೆ, ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುತ್ತಿದ್ದರೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರುವುದು ಖಚಿತ. ಹಾಗಾಗಿ ಯುವ ಉದ್ಯಮಿಗಳು ರಫ್ತು ಕ್ಷೇತ್ರದತ್ತ ಗಮನ ಹರಿಸಲು ಇದು ಸಕಾಲ.

| ಎಸ್. ಬಾಬು ಕಾಸಿಯಾ ಮಾಜಿ ಅಧ್ಯಕ್ಷ ಮತ್ತು ರಫ್ತು ಉದ್ಯಮಿ