ನವದೆಹಲಿ: ಲಡಾಖ್ನ ಪೂರ್ವ ಭಾಗದ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಒಪ್ಪಂದದ ಪ್ರಕಾರ ಚೀನಾ ಯೋಧರು ಹಿಂದೆ ಸರಿಯಬೇಕಿತ್ತು. ಆದರೆ, ಹಾಗೆ ಹಿಂದೆ ಸರಿಯುವಾಗ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು ಬೇಕೆಂದೇ ಹೊಸದಾಗಿ ಟೆಂಟ್ ಹಾಕಲು ಮುಂದಾದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಆರಂಭವಾದ ಮಾತಿನ ಚಕಮಕಿ ಘರ್ಷಣೆಗೆ ಕಾರಣವಾಯಿತು ಎಂದು ಭಾರತ ಸೇನಾಪಡೆಯ ಕಮಾಂಡರ್ ಒಬ್ಬರು ತಿಳಿಸಿದ್ದಾರೆ.
ಭಾರತದ ಪರ 20 ಯೋಧರು ಹುತಾತ್ಮರಾದರೆ, ಚೀನಾದ ಕಮಾಂಡರ್, ಡೆಪ್ಯುಟಿ ಕಮಾಂಡರ್ ಸೇರಿ 43ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಈ ರೀತಿಯ ಘರ್ಷಣೆಯಾಗಿದ್ದು ಇದೇ ಮೊದಲು. ಇಂಥ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಅಗತ್ಯವಾದ ಸಾಮರ್ಥ್ಯ ಮತ್ತು ಮನೋಬಲ ಭಾರತೀಯರ ಯೋಧರಿಗಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಪಿಎಲ್ಎ ಸಹಜವಾಗಿ ನಡೆದುಬಂದು ಗಲ್ವಾನ್ನಲ್ಲಿನ ಭಾರತೀಯ ಭಾಗವನ್ನು ಅತಿಕ್ರಮಿಸುವ ದುಸ್ಸಾಹ ತೋರಿದರು. ಆದರೆ ಭಾರತೀಯ ಯೋಧರು ಇದಕ್ಕೆ ಪ್ರಬಲ ಪ್ರತಿರೋಧ ಒಡ್ಡಿದರು. ತನ್ನ ದುಸ್ಸಾಹಸಕ್ಕೆ ಅದು ತಕ್ಕುದಾದ ಬೆಲೆ ತೆರಬೇಕಾಯಿತು. ಇದುವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಪಿಎಲ್ಎ ಮೃತಪಟ್ಟಿರುವ ಅಥವಾ ಗಾಯಗೊಂಡಿರುವ 35 ಯೋಧರು ಮತ್ತು ಅಧಿಕಾರಿಗಳನ್ನು ಸ್ಥಳಾಂತರಿಸಿದೆ. ಪೆಟ್ರೋಲಿಂಗ್ 14ರ ಬಳಿ ನಿಯೋಜನೆಗೊಂಡಿದ್ದ ಅದರ ಕಮಾಂಡಿಂಗ್ ಆಫೀಸರ್, ಡೆಪ್ಯುಟಿ ಕಮಾಂಡಿಂಗ್ ಆಫೀಸರ್ ಕೂಡ ಹತರಾಗಿರುವ ಖಚಿತ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ಚೀನಾ ಆ ಭಾಗದಲ್ಲಿರುವ ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸುವ ಪೂರ್ವಯೋಜಿತ ಸಂಚು ಹೊಂದಿತ್ತು. ಘರ್ಷಣೆ ಕೂಡ ಆ ಸಂಚಿನ ಭಾಗವಾಗಿತ್ತು. ಹಾಗಾಗಿ ಈ ಘರ್ಷಣೆ ಮತ್ತು ಹಿಂಸೆಗೆ ಅದುವೇ ನೇರಹೊಣೆ ಎಂದು ಭಾರತ ಆರೋಪಿಸಿದೆ.
ಗಲ್ವಾನ್ ಕಣಿವೆಯಲ್ಲಿನ ಘರ್ಷಣೆಯನ್ನು ಗಮನಿಸಿದಾಗ ಏಕಪಕ್ಷೀಯವಾಗಿ ಪರಿಸ್ಥಿತಿಯನ್ನು ಬದಲಿಸಲು ಇದು ಸೌತ್ ಚೀನಾ ಮಹಾಸಾಗರ ಅಲ್ಲ ಎಂಬುದು ಚೀನಾಕ್ಕೆ ಮನವರಿಕೆ ಆಗಿರಬೇಕು. ಜತೆಗೆ ಗಡಿ ಮತ್ತು ಸಾರ್ವಭೌಮತ್ವದ ವಿಷಯ ಬಂದಾಗ ಅವನ್ನು ರಕ್ಷಿಸಿಕೊಳ್ಳಲು ಭಾರತ ಯಾವುದೇ ಹಂತಕ್ಕೂ ಹೋಗಬಲ್ಲದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದೆ.