ನವದೆಹಲಿ: ಕುಖ್ಯಾತ ಪಾತಕಿ ವಿಕಾಸ್ ದುಬೆ ಬಂಧನದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದೆಲ್ಲ ಟೀಕಿಸಲಾಗುತ್ತಿದೆ. ಆದರೆ, ಉತ್ತರ ಪ್ರದೇಶ ಸರ್ಕಾರ ಮಾತ್ರ ವಿಕಾಸ್ ದುಬೆಯ ಬಂಧನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿತ್ತು ಎಂದೇ ಹೇಳಬಹುದಾಗಿದೆ. ಅದಕ್ಕೆ ಈ ಘಟನೆಯೇ ಸಾಕ್ಷಿ.
ವಿಕಾಸ್ ದುಬೆ ಎಲ್ಲಿದ್ದಾನೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದಂತೆ ತೋರುತ್ತದೆ. ಆದ್ದರಿಂದ, ಆತನ ಇರುವಿಕೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಮಧ್ಯಪ್ರದೇಶ ಸರ್ಕಾರದೊಂದಿಗೆ ಈ ವಿಷಯವನ್ನು ಹಂಚಿಕೊಂಡು, ಆತನ ಬಂಧನಕ್ಕೆ ಸಹಕಾರ ಕೇಳಿತ್ತು ಎನ್ನಲಾಗಿದೆ.
ಈ ಕಾರಣದಿಂದಾಗಿ ಮಧ್ಯಪ್ರದೇಶ ಸರ್ಕಾರ ಉಜ್ಜೈನ್ನ ಮಹಾಕಾಲ ಪೊಲೀಸ್ ಠಾಣೆಯ ಮುಖ್ಯಸ್ಥ ಸೇರಿ 8 ಪೊಲೀಸ್ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿತ್ತು ಎನ್ನಲಾಗಿದೆ. ಆತನನ್ನು ಬಂಧಿಸಲು ತೆರಳುವಾಗ ಈ ಬಗ್ಗೆ ಆತನಿಗೆ ಮಾಹಿತಿ ನೀಡುವ ಆತಂಕದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿತ್ತು ಎನ್ನಲಾಗಿದೆ.
ಇದಕ್ಕೂ ಮುನ್ನ ಮಧ್ಯಪ್ರದೇಶ ಪೊಲೀಸರ ಬಂಧನದಲ್ಲಿರುವ ಕುಖ್ಯಾತ ಪಾತಕಿ ಕಾನ್ಪುರದಲ್ಲಿ ತನ್ನ ಮನೆಯ ಮೇಲೆ ಪೊಲೀಸರು ದಾಳಿ ಮಾಡುತ್ತಾರೆ ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳಿಂದಲೇ ಮಾಹಿತಿ ಸಿಕ್ಕಿತ್ತು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಕೂಡ ಅದು ಪುನಾವರ್ತನೆಯಾಗಬಾರದು ಎಂಬ ಕಾರಣಕ್ಕೆ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದ್ದಾಗಿ ಹೇಳಲಾಗಿದೆ.
ವಕೀಲರ ಕಾರಿನಲ್ಲಿ ಪ್ರಯಾಣ: ಕಾನ್ಪುರದಿಂದ ಪರಾರಿಯಾಗಿದ್ದ ವಿಕಾಸ್ ದುಬೆ ಉಜ್ಜೈನ್ ತಲುಪಲು ವಕೀಲರೊಬ್ಬರ ಕಾರನ್ನು ಬಳಸಿದ್ದ ಎಂಬುದು ಇದೀಗ ಬಹಿರಂಗವಾಗಿದೆ. ಲಖನೌ ನಿವಾಸಿಯಾದ ವಕೀಲ ಮನೋಜ್ ಯಾದವ್ ಅವರ ಪುತ್ರನ ಹೆಸರಿನಲ್ಲಿ ಈ ಕಾರು ನೋಂದಾಯಿಸಲ್ಪಟ್ಟಿದೆ. ಮೂರು ರಾಜ್ಯಗಳ ಸರಹದ್ದನ್ನು ದಾಟಿ ವಿಕಾಸ್ ದುಬೆ ಉಜ್ಜೈನ್ ತಲುಪಿದ್ದ ಎನ್ನಲಾಗಿದೆ. ಇದೀಗ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.