ಪಶ್ಚಿಮ ಬಂಗಾಳ: ಭಾರತದಲ್ಲಿ ಪೌರತ್ವದ ಬಗ್ಗೆ ನಿರ್ಧಾರಗಳನ್ನು ಮಾಡುವ ಹಕ್ಕನ್ನು ಸಂವಿಧಾನವು ಕೇಂದ್ರ ಸರ್ಕಾರಕ್ಕೆ ನೀಡಿರುವುದರಿಂದ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ಬರಲಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಮಂಗಳವಾರ (ಆಗಸ್ಟ್ 16) ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ವ್ಯಂಗ್ಯವಾಡಿದ ಮಜುಂದಾರ್, "ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಬಹುದು. ಆದ್ರೆ, ಅದು ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ. ಟಿಎಂಸಿ ಸಿಎಎ ಅನುಷ್ಠಾನಕ್ಕೆ ಒಲವು ತೋರದಿರಬಹುದು. 2024ರ ಲೋಕಸಭಾ ಚುನಾವಣೆಯ ಮೊದಲು ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರಲಾಗುವುದು" ಎಂದು ಹೇಳಿದರು.
ಪೌರತ್ವವನ್ನು ನೀಡುವುದು ಕೇಂದ್ರ ಸರ್ಕಾರದ ವಿಶೇಷತೆ ಮತ್ತು ಸಂವಿಧಾನದ ಪ್ರಕಾರ ನಿರ್ದಿಷ್ಟ ರಾಜ್ಯಗಳದ್ದಲ್ಲ ಎಂದು ಮಜುಂದಾರ್ ಒತ್ತಿ ಹೇಳಿದರು. ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಯಾರು ಭಾರತೀಯ ಪೌರತ್ವ ಪಡೆಯುತ್ತಾರೆ ಅಥವಾ ಪಡೆಯುವುದಿಲ್ಲ ಎಂಬುದನ್ನು ಅವರು ನಿರ್ಧರಿಸಲು ಸಾಧ್ಯವಿಲ್ಲ. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಶ್ಚಿಮ ಬಂಗಾಳದಲ್ಲಿ ವಾಸಿಸುವ ಬಾಂಗ್ಲಾದೇಶಿ ಹಿಂದೂಗಳಿಗೆ ಪೌರತ್ವವನ್ನು ನೀಡುವ ಗುರಿಯನ್ನು ಕೇಂದ್ರ ಹೊಂದಿದೆ. ಅವರಿಗೆಲ್ಲಾ ಸೂಕ್ತ ಸೌಕರ್ಯ ಕಲ್ಪಿಸಲಾಗುವುದು" ಎಂದು ಹೇಳಿದರು,(ಏಜೆನ್ಸೀಸ್).