ರಾಯ್ಪುರ್: ತರಗತಿಯಲ್ಲೇ ವಿದ್ಯಾರ್ಥಿನಿಯರು ಬಿಯರ್ ಪಾರ್ಟಿ ಮಾಡಿರುವ ಆಘಾತಕಾರಿ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಮಸ್ತೂರಿ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿನಿಯರು ಬಿಯರ್ ಪಾರ್ಟಿ ಮಾಡುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಉನ್ನತ ಅಧಿಕಾರಿಗಳು ತಕ್ಷಣ ತನಿಖೆಗೆ ಆದೇಶಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ ಬಿಲಾಸ್‌ಪುರ ಜಿಲ್ಲೆಯ ಭಟ್ಚೌರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಸಹಪಾಠಿಯೊಬ್ಬರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿನಿಯರು ಬಿಯರ್ ಪಾರ್ಟಿ ಆಯೋಜಿಸಿದ್ದರು. ತರಗತಿಯ ಒಳಗಡೆ ಬಿಯರ್ ಸೇವನೆ ಮಾಡಿದ್ದು, ವಿದ್ಯಾರ್ಥಿನಿಯರು ತುಂಬಾ ನಶೆಯಲ್ಲಿದ್ದರು ಎಂದು ವರದಿಯಾಗಿದೆ.
ವಿದ್ಯಾರ್ಥಿನಿಯರು ಬಿಯರ್ ಬಾಟಲ್ಗಳನ್ನು ಹಿಡಿದು ಫೋಟೋ ಮತ್ತು ರೀಲ್‌ಗಳನ್ನು ಸಹ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಕಿಯರ ಈ ಕೃತ್ಯದಲ್ಲಿ ಶಾಲೆಯ ಶಿಕ್ಷಕರೂ ಸಹ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಲೆಯಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವಿಸುವುದನ್ನು ಯಾರು ಕೂಡ ತಡೆಯಲಿಲ್ಲ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ ಬಿಯರ್ ಪಾರ್ಟಿ ನಡೆಸಿದ ಫೋಟೋ ವೈರಲ್ ಆದ ನಂತರ ಸ್ಥಳೀಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಿಇಒ ಸ್ವತಃ ಶಾಲೆಗೆ ಆಗಮಿಸಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ವಿಚಾರಿಸಿದರು. ವಿದ್ಯಾರ್ಥಿನಿಯರು ಬಿಯರ್ ಪಾರ್ಟಿ ಮಾಡುತ್ತಿರುವ ಫೋಟೋಗಳು ತನಿಖಾ ತಂಡಕ್ಕೆ ಸಿಕ್ಕಿವೆ ಎಂದು ಬಿಇಒ ತಿಳಿಸಿದ್ದಾರೆ. ಶಾಲೆಯಲ್ಲಿ ಬಿಯರ್ ಪಾರ್ಟಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶಾಲೆಯಲ್ಲಿ ಮದ್ಯಪಾನ ಮಾಡುವುದು ಗಂಭೀರ ವಿಷಯ, ಹೀಗಾಗಿ ತನಿಖಾ ವರದಿ ಆಧರಿಸಿ ಈ ಬಗ್ಗೆ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. (ಏಜೆನ್ಸೀಸ್)