ನವದೆಹಲಿ: ಪ್ರೇಮಿಗಳ ದಿನಾಚರಣೆಯ ದಿನವೇ ಸುಪ್ರೀಂ ಕೋರ್ಟ್ನಲ್ಲಿ ಬಾಂಬ್ ಭೀತಿ ಆವರಿಸಿತ್ತು. ಭದ್ರತಾ ಸಿಬ್ಬಂದಿ ಸುಪ್ರೀಂ ಕೋರ್ಟ್ ಆವರಣಕ್ಕೆ ಧಾವಿಸಿದ್ದು, ಒಮ್ಮಿಂದೊಮ್ಮೆಗೆ ಎಲ್ಲೆಡೆ ಆತಂಕದ ವಾತಾವರಣ ಕಾಣಿಸಿಕೊಂಡಿತ್ತು.
ಸುಪ್ರೀಂ ಕೋರ್ಟ್ನ ಕೋರ್ಟ್ ನಂಬರ್ 4ರ ಪ್ರದೇಶದಲ್ಲಿ ಈ ಆತಂಕ ಸೃಷ್ಟಿಯಾಗಿತ್ತು. ಸಾಮಾನ್ಯವಾಗಿ ಈ ಪ್ರದೇಶ ಜನಜಂಗುಳಿಯಿಂದ ಕೂಡಿರುತ್ತದೆ. ಬಾಂಬ್ ಭೀತಿಯ ಕಾರಣಕ್ಕೆ ಆ ಪ್ರದೇಶವನ್ನು ಶುಕ್ರವಾರ ರಕ್ಷಣಾ ಸಿಬ್ಬಂದಿ ಸುತ್ತುವರಿದಿದ್ದರು. ಲಖನೌ ನ್ಯಾಯಾಲಯದ ಆವರಣದಲ್ಲಿ ನಿನ್ನೆಯಷ್ಟೇ ಕಚ್ಚಾ ಬಾಂಬ್ ಸ್ಫೋಟಗೊಂಡ ಕಾರಣ, ಸುಪ್ರೀಂ ಕೋರ್ಟ್ ಆವರಣದಲ್ಲೂ ಅಂಥದ್ದೇ ಆತಂಕ ಸೃಷ್ಟಿಯಾಗಿತ್ತು.
ಈ ಆತಂಕಕ್ಕೆ ಕಾರಣವಾಗಿದ್ದು ಬ್ಯಾಗ್ ಒಂದರಿಂದ ಕೇಳಿಬಂದಿದ್ದ ಬೀಪ್ ಶಬ್ದ. ಆ ಶಬ್ದ ಬಹಳ ಹೊತ್ತು ಅಲ್ಲಿದ್ದವರನ್ನು ಭೀತಿಗೀಡುಮಾಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಭದ್ರತಾಪಡೆ ಸಿಬ್ಬಂದಿ ಅಲ್ಲಿದ್ದವರನ್ನೆಲ್ಲ ತೆರವು ಗೊಳಿಸಿ, ಬೀಪ್ ಶಬ್ದ ಬರುತ್ತಿದ್ದ ಬ್ಯಾಗನ್ನು ಪರಿಶೀಲಿಸಿದೆ.
ವಾರಸುದಾರರು ಇಲ್ಲದ ಬ್ಯಾಗ್ ಅದಾಗಿತ್ತು. ಅದರೊಳಗೆ ಇದ್ದ ಪವರ್ ಬ್ಯಾಂಕ್ ಬೀಪ್ ಸದ್ದು ಮಾಡುತ್ತಿತ್ತು. ಇದು ಬಿಟ್ಟು ಬೇರೇನೂ ಆಗಲಿಲ್ಲ. ಸದ್ಯ ಈ ಬ್ಯಾಗನ್ನು ಕಂಟ್ರೋಲ್ ರೂಮ್ನಲ್ಲಿ ಇರಿಸಲಾಗಿದೆ. ಕೋರ್ಟ್ ಆವರಣದಲ್ಲಿ ಇಷ್ಟೆಲ್ಲ ಕೋಲಾಹಲ ನಡೆಯುತ್ತಿದ್ದರೂ, ಕೋರ್ಟ್ನ ನಿತ್ಯ ಕಲಾಪಕ್ಕೆ ಯಾವುದೇ ಅಡ್ಡಿ ಆಗಿಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್)