ಜಯಪುರ (ಕೊಪ್ಪ): ಲಾಕ್ಡೌನ್ ಕಾರಣ ಮಟನ್ ಬೆಲೆ ಗಗನಕ್ಕೇರಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದು, ಕುರಿ ಮಾಂಸದೊಂದಿಗೆ ದನದ ಮಾಂಸ ಸೇರಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಕ್ಕಿಕೊಪ್ಪದ ಅನಿಲ್ ಡಿಮೆಲ್ಲೋ, ಸಿರಾಜ್, ಡೆಂಜಿಲ್ ಹಾಗೂ ಡೆನಿಸ್ ಡಿಸೋಜಾ ಬಂಧಿತರು. ಜಯಪುರದ ಗ್ರಾಮ ಪಂಚಾಯಿತಿಯ ಬಭಾಡಿಗೆ ಮಳಿಗೆ ಇಂಡಿಯನ್ ಮಟನ್ ಸ್ಟಾಲ್ನಲ್ಲಿ ದನದ ಮಾಂಸವಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಅಂಗಡಿ ಮಾಲೀಕ ಸಿರಾಜ್ನನ್ನು ಬಂಧಿಸಿದರು. ವಿಚಾರಣೆ ನಡೆಸಿದಾಗ ರೈತರೊಬ್ಬರ ಹಸು ಕಳ್ಳತನ ಮಾಡಿ ಕೊಂದು ಮಕ್ಕಿಕೊಪ್ಪದ ಅನಿಲ್ ಡಿಮೆಲ್ಲೋನ ತೋಟದಲ್ಲಿ ಮಾಂಸ ತಯಾರಿಸಿರುವುದಾಗಿ ಒಪ್ಪಿಕೊಂಡರು. ಕೃತ್ಯಕ್ಕೆ ಬಳಸಿರುವ ಆಯುಧ ಹಾಗೂ 40 ಕೆಜಿ ದನದ ಮಾಂಸ ವಶಪಡಿಸಿಕೊಂಡಿದ್ದಾರೆ.
ಪೊಲೀಸರೊಂದಿಗೆ ವಾಗ್ವಾದ: ದನದ ಮಾಂಸ ವಶಪಡಿಸಿಕೊಳ್ಳಲು ಮಟನ್ ಸ್ಟಾಲ್ಗೆ ತೆರಳುವ ವೇಳೆ ಪತ್ರಕರ್ತರು ಬರಬಾರದು ಎಂದು ತಡೆದ ಎಎಸ್ಐ ಸತೀಶ್ ನಡವಳಿಕೆ ಅನುಮಾನಕ್ಕೆ ಕಾರಣವಾಗಿದ್ದು, ಪತ್ರಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.