ನ್ಯೂಸ್

ರಾಜ್ಯದಲ್ಲಿ ಹಾದಿ ತಪ್ಪಿವೆ ಗಸ್ತುವಾಹನ!; ರಸ್ತೆ ಸುರಕ್ಷತಾ ಪ್ರಾಧಿಕಾರದ ಲೋಪಗಳನ್ನು ತೆರೆದಿಟ್ಟ ಸಿಎಜಿ ವರದಿ

ಬೆಂಗಳೂರು: ಗಸ್ತು ತಿರುಗಬೇಕಾದ ವಾಹನಗಳು ಬೇರೆ ಕೆಲಸಕ್ಕೆ ನಿಯೋಜನೆಗೊಂಡರೆ, ಆಂಬುಲೆನ್ಸ್​ಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರುವುದೇ ಇಲ್ಲ. ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯ ನಿರ್ವಹಣೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ ನಡೆಸಿ ಈ ಸರಣಿ ಲೋಪಗಳ ಸರಮಾಲೆ ಬಿಚ್ಚಿಟ್ಟಿದ್ದಾರೆ.

2015-16 ಮತ್ತು 2017-18ರ ನಡುವೆ 300 ಅತ್ಯಾಧುನಿಕ ಹೆದ್ದಾರಿ ಗಸ್ತು ವಾಹನಗಳನ್ನು ಹೆದ್ದಾರಿ ಸುರಕ್ಷತಾ ಯೋಜನೆ ಅಡಿ ನಿಯೋಜಿಸಲಾಗಿದೆ. ಸ್ಪಂದಿಸುವ ಘಟಕವಾಗಿ, ಪ್ರಥಮ ಚಿಕಿತ್ಸೆ ನೀಡುವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಅನುಕೂಲವಾಗುವಂತೆ ಆಂಬುಲೆನ್ಸ್, ರಕ್ಷಣಾ ಕಾಯಾಚರಣೆ ತಂಡವಾಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲಹಾ ಘಟಕವಾಗಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಇದು ಆಗಿಲ್ಲ ಎಂಬುದನ್ನು ವರದಿ ಬೊಟ್ಟುಮಾಡಿದೆ.

ವರದಿಯಲ್ಲೇನಿದೆ?
  • 14 ಜಿಲ್ಲೆಗಳಲ್ಲಿ ಗಸ್ತುವಾಹನಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆ , ಈ ವಾಹನಗಳು ಸುಸಜ್ಜಿತವಾಗಿಲ್ಲ, ಇತರ ಉದ್ದೇಶಗಳಿಗಾಗಿ ಬಳಸಲ್ಪಟ್ಟಿವೆ
  • 47 ವಾಹನ ವಿಐಪಿ ಬೆಂಗಾವಲಿಗೆ, ಕಾನೂನು ಸುವ್ಯವಸ್ಥೆಗಾಗಿ, ನಗರದಲ್ಲಿ ಗಸ್ತು ತಿರುಗಲು ಮುಂತಾದ ಕರ್ತವ್ಯಕ್ಕೆ ಬಳಸಲಾಗಿದೆ
  • ಹೆಚ್ಚಿನ ಸಂದರ್ಭದಲ್ಲಿ ದಿನದಲ್ಲಿ ಒಂದು ಸುತ್ತಿನ ಗಸ್ತು ತಿರುಗುವಿಕೆಯೂ ಪೂರ್ಣಗೊಂಡಿಲ್ಲ
  • 44 ವಾಹನಗಳು ಪ್ರಥಮ ಚಿಕಿತ್ಸಾ ಕಿಟ್ ಇರಿಸಿಲ್ಲ, ಔಷಧ ಅವಧಿ ಮುಗಿದಿದ್ದವು
  • ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಹೆಚ್ಚೆಂದರೆ ಕುಳಿತುಕೊಳ್ಳುವ ಭಂಗಿಯಲ್ಲಿ ಮಾತ್ರ ಸಾಗಿಸಬಲ್ಲವು
  • ಸ್ಟ್ರೆಚರ್ ಒದಗಿಸಿದ್ದರೂ ಒಳಗೆ ಹಿಡಿಸುತ್ತಿರಲಿಲ್ಲ
  • ಅಪಘಾತಕ್ಕೊಳಗಾದವರ ಸಾಗಣೆಗೆ ಸೂಕ್ತವಾಗಿಲ್ಲ. ಪ್ರತಿ ವಾಹನಕ್ಕೆ ಇಬ್ಬರು ಸಿಬ್ಬಂದಿ ನೇಮಿಸಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ತರಬೇತಿ ಕೊಟ್ಟಿಲ್ಲ

ಬೆಂಗಳೂರು ರಸ್ತೆ ಅಪಾಯಕಾರಿ: ಪ್ರತಿ ಕಿಲೋಮೀಟರ್​ಗೆ ಸರಾಸರಿ 19ರಿಂದ 20 ಅಪಾಯಕಾರಿ ಸ್ಥಳ ಹೊಂದಿರುವ ಬಿಬಿಎಂಪಿ ರಸ್ತೆಗಳು ರಸ್ತೆ ಬಳಕೆದಾರರಿಗೆ ಅಪಾಯಕಾರಿ ಎಂದು ಸಿಎಜಿ ಹೇಳಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ರಮವಾಗಿ ಪ್ರತಿ ಕಿಲೋಮೀಟರ್​ಗೆ ಕ್ರಮವಾಗಿ 8.87, 8.43 ಮತ್ತು 7.39 ಅಪಾಯ ಸಂಗತಿ ಅಥವಾ ಸ್ಥಳ ಹೊಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೇಗಿರಬೇಕು?: ರಾಷ್ಟ್ರೀಯ ಮತ್ತು ರಾಜ್ಯ ರಸ್ತೆ ಸುರಕ್ಷತಾ ನೀತಿ ಪ್ರಕಾರ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಕೊಡುವಂತಿರಬೇಕು ಹಾಗೂ ಸುರಕ್ಷಿತವಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಹೆದ್ದಾರಿಯುದ್ದಕ್ಕೂ ಪ್ರತಿ 50 ಕಿ.ಮೀ.ಗೆ ಒಂದರಂತೆ ಬೇಸಿಕ್ ಲೈಫ್ ಸಪೋರ್ಟ್ ಆಂಬುಲೆನ್ಸ್ ಲಭ್ಯವಿರಬೇಕು. ಕರ್ನಾಟಕದಲ್ಲಿ 108 ಆಂಬುಲೆನ್ಸ್ ಗಳನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ.

12 ಜಿಲ್ಲೆ ಪರಿಶೀಲನೆ: ಆಡಿಟ್ ತಂಡವು 12 ಜಿಲ್ಲೆಯ 275 ಆಂಬ್ಯುಲೆನ್ಸ್​ಗಳನ್ನು ಪರಿಶೀಲಿಸಿದೆ. ವೈದ್ಯಕೀಯ ಸಲಕರಣೆಗಳಾದ ಟೂರ್ನಿಕೆಟ್​ಗಳು, ಥರ್ವಮೀಟರ್​ಗಳು, ಆಸ್ಪಿರೇಟರ್, ಆರ್ಟರಿಯಲ್ ಪೋರ್ಸ್ಟ್, ಡಿಜಿಟಲ್ ಉಪಕರಣ, ಅಗ್ನಿಶಾಮಕ, ಡಿಫಿಬ್ರಿಲೇಟರ್, ಪೋರ್ಟಬಲ್ ಆಮ್ಲಜನಕ ಸಿಲಿಂಡರ್, ಸ್ಕೂಪ್ ಸ್ಟ್ರೆಚರ್ ಇರಿಸಲಾಗಿಲ್ಲ ಅಥವಾ ಕಳಪೆ ಸ್ಥಿತಿಯಲ್ಲಿದ್ದವು.

ಆಂಬುಲೆನ್ಸ್ ವಿಳಂಬ: 2 ಜಿಲ್ಲೆಗಳಲ್ಲಿ ಆಂಬುಲೆನ್ಸ್ ಕೆಲಸ ಮಾಡದ ಸ್ಥಿತಿಯಲ್ಲಿದ್ದು, ದುರಸ್ತಿ ಮಾಡಿರಲಿಲ್ಲ. ಆಂಬುಲೆನ್ಸ್​ಗಳ ಮೂಲ ಸ್ಥಳವು ದೂರದಲ್ಲಿ ಇದ್ದುದರಿಂದ ಅಥವಾ ವಿಳಂಬವು 30 ನಿಮಿಷಕ್ಕಿಂತ ಹೆಚ್ಚಾಗಿದ್ದುದರಿಂದ ಸಂತ್ರಸ್ತರಿಗೆ ಸುಮಾರು 90 ಸಾವಿರ ನಿದರ್ಶನಗಳಲ್ಲಿ ಸಮಯೋಚಿತ ವೈದ್ಯಕೀಯ ಆರೈಕೆ ಸಾಧ್ಯವಾಗಿಲ್ಲ.

ನಿರ್ಲಕ್ಷ್ಯ ಮಾತ್ರ ಕಾರಣವಲ್ಲ: ಅಪಘಾತದ ಪ್ರಾಥಮಿಕ ಕಾರಣ, ಸಮಯ, ಗೋಚರತೆ, ಅಪಘಾತಕ್ಕೀಡಾಗಿರುವ ವಾಹನಗಳ ಪ್ರಕಾರ, ರಸ್ತೆಯಲ್ಲಿನ ಅಪಾಯಗಳು ಮುಂತಾದ ಅಂಶ ದಾಖಲಿಸದೆ ಕೇವಲ ಅತಿ ವೇಗ ನಿರ್ಲಕ್ಷ್ಯ ಚಾಲನೆ ಎಂದು ದಾಖಲಿಸಲಾಗುತ್ತಿದೆೆ. ಅಪಘಾತದ ಕಾರಣವನ್ನು ನಿರ್ಧರಿಸುವಲ್ಲಿ ಅವುಗಳನ್ನು ಪರಿಗಣಿಸಿದರೆ ರಸ್ತೆ ಸುರಕ್ಷತಾ ಕ್ರಮಗಳ ಉತ್ತಮ ನಿರ್ವಹಣೆಗಾಗಿ ಸಕ್ಷಮ ಅಧಿಕಾರಿಗಳು ಈ ಅಂಶ ಬಳಸಬಹುದು ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ಶಾಕಿಂಗ್...!: ಆರ್​ಟಿಒ ಇನ್​ಸ್ಪೆಕ್ಟರ್​ಗಳಂತಹ ನಿರ್ಣಾಯಕ ಶ್ರೇಣಿಗಳಲ್ಲಿ ಗಮನಾರ್ಹವಾದ ಖಾಲಿ ಹುದ್ದೆಗಳಿರುವ ಕಾರಣದಿಂದ ಚಾಲನಾ ಪರವಾನಗಿಗಳು ಮತ್ತು ವಾಹನಗಳಿಗೆ ಅರ್ಹತಾ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದಂತೆ ನಡೆಸುವ ಪರೀಕ್ಷೆಗಳ ಒಟ್ಟಾರೆ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಸಾರಿಗೆ ಮತ್ತು ಸಾರಿಗೆ ಏತರ ವಾಹನಗಳಿಗೆ ಸಂಬಂಧಿಸಿದಂತೆ ನವೀಕರಣ ಬಾಕಿ ಇರುವ ಚಾಲನಾ ಪರವಾನಗಿಗಳ ದತ್ತಾಂಶದ ವಿಶ್ಲೇಷಣೆಯಿಂದ ತಿಳಿದುಬಂದಿದ್ದೇನೆಂದರೆ ಚಾಲನಾ ಪರವಾನಗಿಗಳನ್ನು ನವೀಕರಿಸದೆಯೇ ಚಾಲನೆ ಮಾಡುತ್ತಿರುವ ಘಟನೆಗಳು ವರ್ಷದಿಂದ ವರ್ಷಕ್ಕೆ ತೀವ್ರತರ ಹೆಚ್ಚಳ ತೋರಿಸಿದೆ.

ಮುಖ್ಯ ಸಂಗತಿಗಳು

  • 22 ಜಿಲ್ಲೆಗಳಲ್ಲಿ ಅಪಘಾತ ಆರೈಕೆ ಕೇಂದ್ರ ಸ್ಥಾಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಿಲ್ಲ. ಈಗಾಗಲೇ ಸ್ಥಾಪಿಸಲಾದ ಕೇಂದ್ರಗಳಲ್ಲಿ ನರರೋಗ ತಜ್ಞರ ಸೇವೆ ಲಭ್ಯವಿಲ್ಲ.
  • 2019ರ ವರೆಗೆ ಅಪಘಾತಗಳ ಸಂಖ್ಯೆಯಲ್ಲಿ ಯಾವುದೇ ಕಡಿತ ಕಂಡುಬಂದಿಲ್ಲ ಆದರೆ 2020ರಲ್ಲಿ ಚಾಲ್ತಿಯಲ್ಲಿದ್ದ ಲಾಕ್​ಡೌನ್ ನಿರ್ಬಂಧಗಳ ಕಾರಣದಿಂದಾಗಿ ಆ ವರ್ಷದಲ್ಲಿ ಇಳಿಕೆ ಕಂಡುಬಂದಿದೆ.
  • ಪುನರಾವರ್ತಿತ, ಮಾರಣಾಂತಿಕ ಅಪಘಾತಗಳು ಸಂಭವಿಸಿದ ಮತ್ತು ಗುರುತಿಸಲಾಗದ ಬ್ಲಾಕ್ ಸ್ಪಾಟ್​ಗಳನ್ನು ಸಮಯೋಚಿತವಾಗಿ ಸರಿಪಡಿಸುವಲ್ಲಿ ಸಂಬಂಧಿಸಿದ ರಸ್ತೆ ನಿರ್ವಹಣಾ ಸಂಸ್ಥೆಗಳು ವಿಫಲವಾಗಿವೆ.
  • ವಿದ್ಯುತ್, ನೀರು, ಒಳಚರಂಡಿ, ಒಎಫ್​ಸಿ ಮತ್ತು ಇತರೆ ಸಂಸ್ಥೆಗಳವರು ನಾಗರಿಕ ಸೌಲಭ್ಯಗಳನ್ನು ಒದಗಿಸುವ ಸಮಯದಲ್ಲಿ ಸಕ್ಷಮ ರಸ್ತೆ ಎಂಜಿನಿಯರಿಂಗ್ ಅಧಿಕಾರಿಗಳನ್ನು ಸಂರ್ಪಸದೆ ಸುಸ್ಥಿತಿಯಲ್ಲಿರುವ ರಸ್ತೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ.