ನ್ಯೂಸ್

ಮನೋಲ್ಲಾಸ: ನೀನು ನೀನಾಗಬಾರದೇ?

rameshmysuru

ಡಾ. ಗಣಪತಿ ಹೆಗಡೆ

ಆತ ಈಗ ತಾನೇ ಹರೆಯಕ್ಕೆ ಕಾಲಿಟ್ಟ ತರುಣ. ಹೆಚ್ಚೇನೂ ಓದು ತಲೆಗೆ ಹತ್ತಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ತುಡಿತ. ಸರಿ, ಮಾರ್ಗದರ್ಶಕರಿಗಾಗಿ ಹುಡುಕಾಟ. ಅವನೂರಿನ ಜನನಾಯಕನನ್ನು ಕಂಡರೆ ಅವನಿಗೆ ಅದೇನೋ ಆಕರ್ಷಣೆ. ಅಬ್ಬಾ, ಇಡೀ ಊರಿನ ಜನ ಅವನನ್ನು ಗೌರವವಿಸುತ್ತಾರೆ. ಹೌದು, ತಾನು ಅವನಂತಾಗಬೇಕು. ಇಲ್ಲ ಅವನಿಗಿಂತ ಹೆಚ್ಚು ಪ್ರಭಾವಶಾಲಿಯಾಗಬೇಕು ಎಂದುಕೊಂಡು ಮರುದಿನವೇ ನಾಯಕನ ಮನೆಗೆ ಹೋದ, ಅವನ ಹಿಂಬಾಲಕನಾಗಿ ಸೇರಿಕೊಂಡ.

ನಾಯಕನ ಮನೆಯಲ್ಲಿ ಸ್ಟಾರ್ ನಟನೊಬ್ಬನ ಆಳೆತ್ತರದ ಚಿತ್ರವಿತ್ತು, ನಿತ್ಯವೂ ನಾಯಕ ಅವನ ಭಾವಚಿತ್ರಕ್ಕೆ ಕೈಮುಗಿಯುತ್ತಿದ್ದ. ಯುವಕನಿಗೆ ಆಶ್ಚರ್ಯವಾಯಿತು! ಇದೇನಿದು, ಈ ನಾಯಕನೇ ಶ್ರೇಷ್ಠ ಎಂದು ನಂಬಿ ಬಂದರೆ ಇವನು ಈ ನಟನಿಗೆ ಕೈ ಮುಗಿಯುತ್ತಾನೆ. ಅಂದರೆ ನಾನು ನಾಯಕನಾದರೆ ಪ್ರಯೋಜನವಿಲ್ಲ, ಈ ನಟನಂತಾಗಬೇಕು. ಮರುದಿನ ನಟನ ಮನೆಯನ್ನು ಅರಸುತ್ತ ಯುವಕ ನಗರಕ್ಕೆ ಬಂದ. ಮನೆಯನ್ನು ಹೇಗೋ ಪತ್ತೆ ಹಚ್ಚಿ ನಟನ ಮನೆಯಲ್ಲಿ ಆಳಾಗಿ ಕೆಲಸಕ್ಕೆ ಸೇರಿದ. ನಿತ್ಯವೂ ನಟನನ್ನು ನೋಡಿ ಆನಂದ ಪಡುವ, ತಾನು ಅವನಂತಾಗಬೇಕೆಂಬ ಹಂಬಲಿಸುವ ನಿತ್ಯಕಾಯಕ ಅವನದು. ನಟನ ಮನೆಯಲ್ಲಿ ಸುಂದರವಾದ ಆಳೆತ್ತರದ ಎರಡು ನಾಯಿಗಳಿದ್ದವು. ನಟನಿಗೋ ಅವುಗಳೆಂದರೆ ಪ್ರಾಣ. ಈ ಯುವಕನಿಗೆ ನಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ. ಒಂದು ದಿನ ನಟನ ಅಚಾತುರ್ಯದಿಂದ ನಾಯಿಗಳು ಮನೆಯಿಂದ ತಪ್ಪಿಸಿಕೊಂಡು ಬಿಟ್ಟವು. ನಟ ಅಧೀರನಾಗಿ, ದೇವರಲ್ಲಿ ಪ್ರಾರ್ಥಿಸತೊಡಗಿದ. ಈ ಯುವಕ ನಾಯಿಗಳನ್ನು ಹುಡುಕಿ ಹೊರಟವ ಎರಡು ದಿನಗಳ ನಂತರ ನಾಯಿಗಳೊಂದಿಗೆ ಮನೆಗೆ ವಾಪಸ್ ಬಂದ. ನಟನಿಗೆ ಹೋದ ಜೀವ ಬಂದಂತಾಯ್ತು. ನಾಯಿಗಳನ್ನುಳಿಸಿದ ಈ ಯುವಕನನ್ನು ಕೈ ಮುಗಿದು ಅಭಿನಂದಿಸಿದ, ‘ನನ್ನ ಪ್ರಾಣ ಉಳಿಸಿದ ಆಪದ್ಬಂಧು’ ಎಂದು ಕೊಂಡಾಡಿದ. ‘ನಿನಗೇನು ಬೇಕು ಹೇಳು’ ಎಂದು ಭಾವುಕನಾಗಿ ನುಡಿದ. ಯುವಕನಿಗೀಗ ಗೊಂದಲ. ಯಾವ ನಟನನ್ನು ಅತ್ಯಂತ ಬಲಶಾಲಿ, ಶ್ರೇಷ್ಠ ಎಂದೆಲ್ಲ ಅಂದುಕೊಂಡು ಬಂದಿದ್ದನೋ ಅವನೇ ಇಂದು ಈತನಿಗೆ ಕೈ ಮುಗಿದು ನಿಂತಿದ್ದಾನೆ.

ವಾಪಸ್ ಊರಿಗೆ ಬಂದ. ತನ್ನ ತಂದೆಯ ಹತ್ತಿರ ಎಲ್ಲವನ್ನೂ ವಿಸ್ತಾರವಾಗಿ ಹೇಳಿಕೊಂಡು ‘ನಾನೀಗ ಯಾರಂತಾಗಲಿ?’ ಎಂದು ಪ್ರಶ್ನಿಸಿದ. ‘ಮಗ, ಹುಡುಕುತ್ತ ಹೋದರೆ ಒಬ್ಬರಿಗಿಂತ ಒಬ್ಬರು ಶ್ರೇಷ್ಠರು, ಬಲಿಷ್ಠರು ಸಮಾಜದಲ್ಲಿ ಸಿಗುತ್ತಾರೆ. ಇದಕ್ಕೆ ಕೊನೆಯಿಲ್ಲ. ಹುಡುಕಾಟದಲ್ಲಿಯೇ ನಮ್ಮ ಜೀವನ ಕೊನೆಯಾಗಿಬಿಡಬಹುದು. ಹಾಗಂತ ಯಾರೂ ಪ್ರಶ್ನಾತೀತ ಶ್ರೇಷ್ಠರಲ್ಲ. ಆ ನಟ ಕೈ ಮುಗಿದದ್ದು ನಿನ್ನಲ್ಲಿರುವ ಆತ್ಮಶಕ್ತಿಗೆ. ಅದಕ್ಕಿಂತ ಬಲಶಾಲಿ ಇನ್ನೊಂದಿಲ್ಲ. ಇನ್ಯಾರಲ್ಲೋ ನಿನ್ನ ಆದರ್ಶವನ್ನು ಹುಡುಕುವ ಬದಲು ನೀನು ನಿನ್ನನ್ನು ಗುರುತಿಸಿಕೋ. ಆದ್ದರಿಂದ ನಿಜವಾದ ಶಕ್ತಿಶಾಲಿ ವ್ಯಕ್ತಿ ನೀನೇ. ನಿನಗಿಂತ ಬಲಿಷ್ಠ ಈ ಪ್ರಪಂಚದಲ್ಲಿ ಇನ್ಯಾರಿದ್ದಾರು? ಹಾಗೆಂದುಕೊಂಡು ಮುನ್ನುಗ್ಗು. ನಿನ್ನ ಗುರಿ ಸಾಧನೆಯಾಗುತ್ತದೆ’ ಎಂದು ಸಂತೈಸಿದ. ನಾವು ನಮ್ಮನ್ನು ಅವಲೋಕಿಸಿ, ಗುರುತಿಸಿಕೊಳ್ಳುವ ಸಮಯ ಬಂದಿದೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು)