ನ್ಯೂಸ್

ಸಂಪಾದಕೀಯ: ಜವಾಬ್ದಾರಿ ಮೆರೆಯೋಣ

rameshmysuru

ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮತ್ತೊಮ್ಮೆ ದಿಗ್ಬಂಧನ ವಿಧಿಸಲಾಗುತ್ತದೆಯೇ ಎಂಬ ಆತಂಕ ಜನರಲ್ಲಿ ಮನೆಮಾಡಿತ್ತು. ಸೋಮವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಮತ್ತೆ ಲಾಕ್​ಡೌನ್ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ’ ಎಂದಿದ್ದಾರೆ.

ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನಜೀವನದ ಪಾಲಿಗೆ ಇದು ನಿಜಕ್ಕೂ ಸಮಾಧಾನದ ಸುದ್ದಿ. ಸೋಂಕು ಪ್ರಕರಣಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕರೊನಾ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ. ಜನರಲ್ಲಿ ಮಾಸ್ಕ್ ಬಳಕೆಯನ್ನು ಹೆಚ್ಚಿಸಲು ಅದು ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ರಾಜಧಾನಿಯಿಂದ ಗ್ರಾಮ ಮಟ್ಟದವರೆಗೆ ಅರಿವು ಮೂಡಿಸಲು ಕಾರ್ಯಕ್ರಮ ನಡೆಯಲಿದ್ದು, ಜೂನ್ 18ರಂದು ಬೆಂಗಳೂರಿನಲ್ಲಿ ‘ಮಾಸ್ಕ್ ದಿನ’ ಆಚರಿಸಲಾಗುತ್ತಿದೆ. ಜಾಗೃತಿ ಮೂಡಿಸಿದ ಬಳಿಕವೂ ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ200 ರೂ. ದಂಡ ತೆತ್ತಬೇಕಾಗುತ್ತದೆ. ಅಲ್ಲದೆ, ವೈಯಕ್ತಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಕ್ವಾರಂಟೈನ್ ನಿಯಮದಲ್ಲೂ ಪರಿಷ್ಕರಣೆ ಮಾಡಲಾಗಿದೆ.

ರೋಗಿಗಳ ಒತ್ತಡ ಹೆಚ್ಚುತ್ತಿರುವುದರಿಂದ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸಾ ವಾರ್ಡ್ ಆರಂಭಕ್ಕೆ ಅನುಮತಿ ನೀಡಲಾಗಿದೆ ಹಾಗೂ ರಾಜ್ಯಾದ್ಯಂತ ಏಕರೂಪ ಚಿಕಿತ್ಸಾ ದರ ನಿಗದಿಗೂ ನಿರ್ಧರಿಸಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ವಿಶೇಷ ಕಾರ್ಯಪಡೆ ರಚನೆಯಾಗಲಿದೆ. ರಾಜ್ಯದಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇಕಡ 1.2 ರಷ್ಟಿದ್ದರೆ, ದೇಶದ್ದು ಶೇ. 2.8ರಷ್ಟಿದೆ. ರಾಜ್ಯದಲ್ಲಿ ಗುಣಮುಖರಾದವರ ಪ್ರಮಾಣವೂ ಶೇಕಡ 56ಕ್ಕೆ ಏರಿಕೆಯಾಗಿದೆ. ದಿಗ್ಬಂಧನ ಹಿಂಪಡೆದ ಬಳಿಕ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ ಎಂಬುದೇನೋ ನಿಜ. ಜತೆಗೆ, ಆರ್ಥಿಕ ಚಟುವಟಿಕೆಗಳು ಮರುಜೀವ ಪಡೆಯುತ್ತಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಹಾಗಂತ, ಕರೊನಾ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅವಶ್ಯಕವಾದ ಎಲ್ಲ ಕ್ರಮಗಳನ್ನು ಕಾಲಕಾಲಕ್ಕೆ ಕೈಗೊಳ್ಳುತ್ತಲೇ ಇದೆ. ಇದರ ಭಾಗವಾಗಿಯೇ, ಮುಖಗವಸು ಧರಿಸುವ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಇಲ್ಲಿ ಜನರ ಪಾತ್ರವೂ ಅಷ್ಟೇ ಮುಖ್ಯ. ಎಲ್ಲ ಸರ್ಕಾರವೇ ಮಾಡಿಕೊಳ್ಳಲಿ ಎಂದು ಜನಸಾಮಾನ್ಯರು ಮೈಮರೆತು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಅದರಿಂದ ಎಲ್ಲರಿಗೂ ಅಪಾಯ.

ಪ್ರತೀ ನಾಗರಿಕನೂ ತನ್ನ ಜವಾಬ್ದಾರಿ ಮತ್ತು ಬದ್ಧತೆಯನ್ನು ಅರಿತು ವಿವೇಕದಿಂದ ವರ್ತಿಸಬೇಕಿದೆ. ಈಗಲೂ ಎಷ್ಟೋ ಜನ ಸಾರ್ವಜನಿಕ ಪ್ರದೇಶಗಳಲ್ಲಿ ಮುಖಗವಸು ಹಾಕಿಕೊಳ್ಳದೆ ಸಂಚರಿಸುತ್ತಿದ್ದಾರೆ. ಗುಂಪುಗೂಡುವುದು, ವೈಯಕ್ತಿಕ ಅಂತರವನ್ನು ನಿರ್ಲಕ್ಷಿಸುವುದು ಸಾಮಾನ್ಯ ಎಂಬಂತಾಗಿದೆ. ಜನರ ವರ್ತನೆ ಹೀಗೆಯೇ ಇದ್ದರೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗದೆ ಇನ್ನೇನಾದೀತು? ವ್ಯವಸ್ಥೆಯನ್ನು ತೆಗಳುವ ಮುನ್ನ ನಾವು ಕೂಡ ಆ ವ್ಯವಸ್ಥೆಯ ಭಾಗವೆಂದು ಅರಿತು ನಮ್ಮ ಹೊಣೆಗಾರಿಕೆ ಮೆರೆಯಬೇಕು. ಜನರ ಸಮರ್ಪಕ ಸಹಕಾರ ಸಿಕ್ಕರೆ ಕರೊನಾ ಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ.