ಹಾಸನ: ಪ್ರತಿಯೊಬ್ಬರೂ ಓದಿದ ಶಾಲೆಗೆ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಕೃತಜ್ಞರಾಗಿರಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಪ್ರಯುಕ್ತ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿಸ್ವಾರ್ಥದಿಂದ ಕೆಲಸ ಮಾಡುವ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಅವುಗಳ ಜೀರ್ಣೋದ್ಧಾರ ಮಾಡುವ ಕೆಲಸವನ್ನು ಕೈಗೆತ್ತುಕೊಳ್ಳುತ್ತೇನೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ರೈತರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಹೊಲದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇದು ತಪ್ಪಬೇಕು. ಹಾಗೆ ಮಾಡದೆ ಶಾಲೆಗೆ ಕಳುಹಿಸಬೇಕು. ನಮ್ಮ ತಂದೆ ಹೆಸರಿನಲ್ಲಿ ಎರಡು ಶಾಲೆಗಳನ್ನು ತೆರೆೆಯುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ನಿಸ್ವಾರ್ಥದಿಂದ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಜೀವನ ಮಾಡುತ್ತಿರುವವರು ಶಿಕ್ಷಕರು. ಪ್ರತಿಯೊಂದು ವಿಷಯದಲ್ಲಿಯೂ ಗುರುಗಳನ್ನು ಕಾಣುವಂತಹ ಸಂಸ್ಕೃತಿ ಇರುವ ದೇಶ ನಮ್ಮದು. ಗುರುವಿನಿಂದ ಶಿಕ್ಷಣ ಕಲಿಯುವುದೇ ನಿಜವಾದ ಕಲಿಕೆ ಎಂದರು.
ಸಂಪೂರ್ಣ ವ್ಯಕ್ತಿತ್ವ ರೂಪಿಸಲು ಗುರುವಿನ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವುದೇ ತಂತ್ರಜ್ಞಾನ ಮುಂದುವರಿದರೂ ಕೃತಕ ಬುದ್ಧಿಮತ್ತೆ ಬಂದರೂ ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ. ಜತೆಗೆ ಪ್ರತಿಯೊಬ್ಬರಿಂದಲೂ ಪ್ರತಿಕ್ಷಣ ಕಲಿಯುವಂಥದ್ದು ಇದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಅವರವರ ಸಾಮರ್ಥ್ಯದ ಮೇರೆಗೆ ಸರ್ಕಾರಿ ಶಾಲೆ ಉಳಿಸಲು ಪ್ರಯತ್ನಿಸಬೇಕು. ಶಿಕ್ಷಣಕ್ಕೆ ಸಾವಿತ್ರಿಬಾ ಫುಲೆ, ಜ್ಯೋತಿಬಾ ಫುಲೆ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆ ಅಪಾರ. ಸರ್ಕಾರಿ ಶಾಲೆ ಉಳಿಸಿ ಅಭಿವೃದ್ಧಿಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಮನಸು ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿ, ಓದುವ ಹಂತದಲ್ಲಿಯೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದವರು ರಾಧಾಕೃಷ್ಣನ್. ಅವರು ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರರಾದ ಎಂ.ಕೆ.ಹೇಮಾಲತಾ ಕಮಲ್‌ಕುಮಾರ್, ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿದರು. ಸಂಸದ ಶ್ರೇಯಸ್ ಎಂ.ಪಟೇಲ್ ಅನುಪಸ್ಥಿತಿಯಲ್ಲಿ ಅವರು ಕಳುಹಿಸಿದ ಸಂದೇಶವನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಲರಾಮ ಪ್ರಸ್ತುತ ಪಡಿಸಿದರು. ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಗುರುಭವನದ ಕೆಲಸ ಮಾಡಿಸಿ ಕೊಡಲು ಶಿಕ್ಷಕರು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಮುಂದಿನ ವರ್ಷದೊಳಗೆ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ಹೇಳಿದರು. ಉತ್ತರ ಬಡಾವಣೆ ಶಾಲೆ ಅಭಿವೃದ್ಧಿಗೆ ಚಂದ್ರಕುಮಾರ್ ಅವರು ಹತ್ತು ಸಾವಿರ ರೂ.ದೇಣಿಗೆಯನ್ನು ಶಾಲೆ ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಮೂಲಕ ನೀಡಿದರು.