ನ್ಯೂಸ್

ತಂಬಾಕಿನೊಂದಿಗೆ ಅನ್ಯ ಪದಾರ್ಥಗಳು ಸೇರದಂತೆ ಎಚ್ಚರ ವಹಿಸಿ

ಹುಣಸೂರು: ಹುಣಸೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಬೆಳೆಯುವ ಎಫ್‌ಸಿವಿ ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು, ತಂಬಾಕಿನೊಂದಿಗೆ ಅನ್ಯ ಪದಾರ್ಥಗಳು ಸೇರದಂತೆ ರೈತರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಸಲಹೆ ನೀಡಿದರು.


ನಗರದ ಸಿಟಿಆರ್‌ಐ ಕೇಂದ್ರದಲ್ಲಿ ಮಂಗಳವಾರ ಎಸ್‌ಇಪಿ ಯೋಜನೆಯಡಿ 100 ಜನ ಪರಿಶಿಷ್ಟ ಜಾತಿಯ ತಂಬಾಕು ಕೃಷಿಕರಿಗೆ ಟಾರ್ಪಾಲ್‌ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.


ತಂಬಾಕು ಹದಗೊಳಿಸುವ, ಬೇಲ್ ಕಟ್ಟುವ ವೇಳೆಯಲ್ಲಿ ಮನುಷ್ಯರ ಉಗುರು, ಕೂದಲು, ತಿಂಡಿ ಪದಾರ್ಥಗಳು, ಕುರಿ, ಕೋಳಿಗಳ ಹಿಕ್ಕೆ, ಪ್ಲಾಸ್ಟಿಕ್ ವಸ್ತುಗಳು ಸೇರುತ್ತಿರುವುದರ ಕುರಿತು ಕೇಂದ್ರದ ಅಧಿಕಾರಿಗಳು ಆಗಾಗ್ಗೆ ರೈತರಿಗೆ ಎಚ್ಚರಿಸುತ್ತಿರುತ್ತಾರೆ. ಆದರೆ ಹಲವಾರು ಕಾರಣಗಳಿಂದ ಇಂತಹ ಅನನುಕೂಲಗಳು ಮುಂದುವರಿಯುತ್ತಲೇ ಬಂದಿವೆ. ಅನ್ಯಪದಾರ್ಥಗಳ ಮಿಶ್ರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ಕಳೆದುಕೊಳ್ಳುವ ಆತಂಕವಿದೆ. ಹಾಗಾಗಿ ರೈತರು ಹೆಚ್ಚಿನ ನಿಗಾವಹಿಸಿ ತಂಬಾಕು ಬೇಲ್‌ಗಳನ್ನು ಕಟ್ಟುವಾಗ ಅಥವಾ ಹದಗೊಳಿಸುವ ಕಾರ್ಯ ನಡೆಸುವಂತೆ ತಿಳಿಸಿದರು.


ತಂಬಾಕು ಮಂಡಳಿಯ ಪ್ರಾದೇಶಿಕ ಅಧಿಕಾರಿ(ಆರ್‌ಎಂಒ) ಪಿ.ಸುಬ್ಬರಾವ್ ಮಾತನಾಡಿ, ಸಿಟಿಆರ್‌ಐ ವತಿಯಿಂದ ತಂಬಾಕು ರೈತರಿಗೆ ಹಲವಾರು ಯೋಜನೆಗಳ ಮೂಲಕ ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ರೈತರು ಇನ್ನಷ್ಟು ಸುಧಾರಿತ ಕೃಷಿ ಪದ್ಧತಿಯನ್ನು ಅನುಸರಿಸಿ ಹೆಚ್ಚಿನ ಇಳುವರಿ ಪಡೆಯಬೇಕೆಂದು ತಿಳಿಸಿದರು.


ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಂ.ಮಹದೇವಸ್ವಾಮಿ, ಹರಾಜು ಅಧೀಕ್ಷಕ ರಾಮ್‌ಮೋಹನ್ ಸೂರಿ, ಐಟಿಸಿ ವ್ಯವಸ್ಥಾಪಕ ಚನ್ನವೀರೇಶ್ ಹಾಗೂ ಫಲಾನುಭವಿಗಳು ಹಾಜರಿದ್ದರು.