ಶಿವಮೊಗ್ಗ: ಮಕ್ಕಳಿಗೆ ಮೀಸಲ್ಸ್, ರುಬೆಲ್ಲಾ ಮತ್ತು ಇತರ ಲಸಿಕೆಗಳನ್ನು ಸಕಾಲದಲ್ಲಿ ನೀಡಬೇಕು. ಯಾವ ಮಕ್ಕಳು ಲಸಿಕೆಯಿಂದ ದೂರವುಳಿಯುವಂತೆ ಆಗಬಾರದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮೀಸಲ್ಸ್, ರುಬೆಲ್ಲಾ ಮತ್ತು ಇತರ ಲಸಿಕೆಗಳನ್ನು ಸರಿಯಾದ ವೇಳೆಗೆ ನೀಡದಿದ್ದರೆ ರೋಗ ನಿರ್ಮೂಲನೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಎಂಆರ್ ಲಸಿಕೆಗಳ ಕೊರತೆಯಿದೆ. ಹೀಗಾಗಿ ನೀಡುತ್ತಿಲ್ಲ ಎಂಬ ದೂರುಗಳಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಂದ ಇದನ್ನು ಉಚಿತವಾಗಿ ಪಡೆಯಬಹುದು. ಲಸಿಕೆ ನೀಡದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಡಬ್ಲುೃಎಚ್‌ಒ ಪ್ರತಿನಿಧಿ ಡಾ. ಎಚ್.ಜಿ.ಹರ್ಷಿತ್ ಮಾತನಾಡಿ, ಶೇ.95ರಷ್ಟು ಲಸಿಕೆ ನೀಡುವ ಗುರಿಯಿದೆ. ಈಗಾಗಲೇ ಶೇ.89 ಸಾಧನೆಯಾಗಿದೆ. ಶಿವಮೊಗ್ಗ ನಗರದಲ್ಲೇ ಲಸಿಕೆ ವಂಚಿತರು ಹೆಚ್ಚಿದ್ದಾರೆ. ಲಸಿಕೆಯಿಂದ ವಂಚಿತರಾದವರು, ಡೋಸ್‌ಗಳ ನಡುವೆ ವ್ಯತ್ಯಾಸ ಆಗಿರುವುದನ್ನು ಗುರುತಿಸಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಶೇ.80ರಷ್ಟು ಜ್ವರ ಹಾಗೂ ದದ್ದು ಪ್ರಕರಣವನ್ನು ರುಬೆಲ್ಲಾ ಪರೀಕ್ಷೆಗಾಗಿ ಮಾದರಿಯನ್ನು ವೈರಾಲಜಿಗೆ ಕಳುಹಿಸಬೇಕು ಎಂದರು.
ಜಿಪಂ ಸಿಇಒ ಎನ್.ಹೇಮಂತ್, ಡಿಎಚ್‌ಒ ಡಾ. ನಟರಾಜ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಅಧೀಕ್ಷಕ ಡಾ. ತಿಮ್ಮಪ್ಪ, ಜಿಲ್ಲಾ ಲಸಿಕಾಧಿಕಾರಿ ಡಾ. ನಾಗರಾಜ ನಾಯ್ಕ ಇತರರಿದ್ದರು.