ಲಿಂಗನಮಕ್ಕಿಗೆ ಭೇಟಿ ನೀಡಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಜೋಗದ ಕೆಪಿಸಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಎಚ್.ಆರ್.ರಮೇಶ್, ಜಿ.ಇ. ಮೋಹನ್, ಡಾ. ನಯನಾ ಇತರರಿದ್ದರು.  
ನ್ಯೂಸ್

ಶರಾವತಿ ನದಿ ಪಾತ್ರದಲ್ಲಿ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ

ಕಾರ್ಗಲ್: ಲಿಂಗನಮಕ್ಕಿ ಜಲಾಶಯದ ನೀರು ಬಿಟ್ಟಾಗ ಹೊನ್ನಾವರ ಶರಾವತಿ ನದಿಯ ಎಡದಂಡೆ ಮತ್ತು ಬಲದಂಡೆಯ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಈಗಲೇ ಮುನ್ನೆಚ್ಚರಿಕೆ ವಹಿಸಿ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಜಲಾಶಯದ ಅಧಿಕಾರಿಗಳಿಗೆ ತಿಳಿಸಿದರು.

ಲಿಂಗನಮಕ್ಕಿ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿ ಒಳಹರಿವು, ನೀರಿನ ಸಂಗ್ರಹವನ್ನು ಪರಿಶೀಲಿಸಿ ಮಾತನಾಡಿದ ಅವರು, ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ ಸುಮಾರು 450 ಮನೆಗಳು, 1 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ 2200ಕ್ಕೂ ಅಧಿಕ ಮನೆಗಳು ಜಲಾವೃತವಾಗಲಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಈಗಾಗಲೇ ಹಲವು ದುರಂತಗಳು ಸಂಭವಿಸಿ ಅನೇಕರು ಪ್ರಾಣ, ನೆಲೆಯನ್ನು ಕಳೆದುಕೊಂಡಿದ್ದಾರೆ. ಈಗ ಜಿಲ್ಲೆಯ ಜಲಾಶಯಗಳು ಭರ್ತಿಯಾಗಿವೆ. ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಎಡದಂಡೆ ಮತ್ತು ಬಲದಂಡೆಯಲ್ಲಿ ವಾಸಿಸುವ ಜನರಿಗೆ ತೊಂದರೆಯಾಗಬಾರದು ಎಂದು ಸಚಿವರು ಸೂಚಿಸಿದರು.
ಜಲಾಶಯ ಭರ್ತಿ ಆಗುವವರೆಗೂ ಕಾಯುವುದು ಬೇಡ. ಶೇ.80ರಷ್ಟು ಭರ್ತಿ ಆಗುತ್ತಿರುವಂತೆ ಸ್ವಲ್ಪ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಸಮುದ್ರದಲ್ಲಿ ಏರಿಳಿತ ಇರುವುದರಿಂದ ನೀರಿನ ಇಳಿಕೆ ಇರುವಾಗ ನೀರು ಬಿಡಬೇಕು. ಸಮುದ್ರದಲ್ಲಿ ಏರಿಕೆ ಇದ್ದಾಗ ಬಿಟ್ಟರೆ ಅಲ್ಲಿ ಗಾಳಿಯ ಒತ್ತಡ ಹೆಚ್ಚಾಗಿರುತ್ತದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಹೆಚ್ಚಾಗಲಿದೆ. ಹಾಗಾಗಿ ಈ ತಂತ್ರವನ್ನು ಅನುಸರಿಸಿ ಎಂದು ಸಲಹೆ ನೀಡಿದರು.
ಸಚಿವರೊಬ್ಬರ ಭೇಟಿ ಇದೇ ಮೊದಲು: ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿ ಇಷ್ಟು ವರ್ಷ ಕಳೆದರೂ ಉತ್ತರ ಕನ್ನಡದ ಯಾವೊಬ್ಬ ಸಚಿವರು ಇಲ್ಲಿಯ ತನಕ ಭೇಟಿ ನೀಡಿಲ್ಲ. ಸಚಿವ ಮಂಕಾಳ ವೈದ್ಯ ಮೊದಲ ಬಾರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿಂದಲೇ 13 ಪಂಚಾಯಿತಿ ಪಿಡಿಒಗಳ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಾಧಕ-ಬಾಧಕಗಳ ಚರ್ಚಿಸಿದರು. ಉಭಯ ತಾಲೂಕಿನ ಹಿರಿಯ ಅಧಿಕಾರಿಗಳು, ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ಲಿಂಗನಮಕ್ಕಿ ಕಾರ್ಯನಿರ್ವಾಹಕ ಅಭಿಯಂತ ಕೆ.ಶಿವಪ್ರಕಾಶ, ಗೆರುಸೊಪ್ಪ ಕೆಪಿಸಿ ಅಭಿಯಂತ ಗಿರೀಶ ಮತ್ತಿತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್, ಕಾಮಗಾರಿ ವಿಭಾಗದ ಜಿ.ಇ. ಮೋಹನ್, ಪಪಂ ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಸ್ಥಳೀಯ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್‌ಕುಮಾರ್ ಇತರರಿದ್ದರು.