ಶಿವಮೊಗ್ಗ: ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ವಿದೇಶಕ್ಕೆ ಯುವಕ, ಯುವತಿಯರನ್ನು ರವಾನೆ ಮಾಡುತ್ತಿರುವ 14 ನಕಲಿ ಏಜೆನ್ಸಿಗಳು ಪತ್ತೆಯಾಗಿವೆ. ನಕಲಿ ಏಜೆನ್ಸಿಗಳ ಬಗ್ಗೆ ಶೋಧ ಮುಂದುವರಿದಿದ್ದು, ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಅನಿವಾಸಿ ಕನ್ನಡಿಗರು ಹಾಗೂ ಕುಟುಂಬದವರಿಂದ ಅಹವಾಲು ಮತ್ತು ದೂರು ಸ್ವೀಕಾರ ಸಭೆ ನಡೆಸಿದ ಅವರು, ವಿವಿಧ ಕೆಲಸಗಳ ನಿಮಿತ್ತ 14 ಲಕ್ಷದಷ್ಟು ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದಾರೆ. ನಕಲಿ ಏಜೆನ್ಸಿ ಮೂಲಕ ತೆರಳಿದ ದುಡಿಯುವ ವರ್ಗ ಅಲ್ಲಿ ತೊಂದರೆಗೆ ಒಳಗಾಗಿ ಯಾವುದೋ ಕೆಲಸ ಮಾಡುವುದು ಅನಿವಾರ್ಯವಾಗಿದೆ. ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಉದ್ಯೋಗದಾತರು ಕಿತ್ತುಕೊಂಡು ಸಾವಿರಾರು ಭಾರತೀಯರು ಪರಿತಪಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹೆಚ್ಚು ವೇತನ ಕೊಡಿಸುವುದಾಗಿ ನಕಲಿ ಏಜೆನ್ಸಿಗಳು ಜನರನ್ನು ನಂಬಿಸಿ ಮೋಸದ ಜಾಲಕ್ಕೆ ಸಿಲುಕಿಸುತ್ತಿವೆ. ಹೊರಬರಲು ಸಾಧ್ಯವಾಗದೆ ಗಲ್ಫ್ ರಾಷ್ಟ್ರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಬಹುತೇಕರ ಮಾಹಿತಿಯೇ ಇಲ್ಲದೆ ಅವರನ್ನು ವಾಪಸ್ ಕರೆಸಿಕೊಳ್ಳಲು ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಹಾಗಾಗಿ ನಕಲಿ ಏಜೆನ್ಸಿಗಳ ಪಟ್ಟಿ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಡಿಸಿ ಸಿದ್ದಲಿಂಗ ರೆಡ್ಡಿ, ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ, ಎಸಿ ಸತ್ಯನಾರಾಯಣ, ಭದ್ರಾವತಿ ತಹಸೀಲ್ದಾರ್ ಪ್ರದೀಪ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಗೂ ಹಕ್ಕಿಪಿಕ್ಕಿ ಸಮುದಾಯವರು ಹಾಜರಿದ್ದರು.
ಗುರುತಿನ ಚೀಟಿಗಾಗಿ ಮನವಿ
ರಾಜ್ಯದಲ್ಲಿ ನಾವು ವಿವಿಧೆಡೆ ಓಡಾಡಲು ಅಡ್ಡಿಯಾಗುತ್ತಿದೆ. ಆದ್ದರಿಂದ ಐಡಿ ಕಾರ್ಡ್ ನೀಡುವಂತೆ, ತಾವು ವಾಸಿಸುತ್ತಿರುವ ಮನೆಗಳು ಮತ್ತು ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ನೀಡುವಂತೆ ಹಾಗೂ ಆದಿವಾಸಿ ತೈಲ ಕಂಪನಿ ತೆರೆಯಲು ಸ್ಥಳ ಮತ್ತು ಪರವಾನಗಿ ನೀಡುವಂತೆ ಹಕ್ಕಿಪಿಕ್ಕಿ ಸಮುದಾಯದವರು ಡಾ. ಆರತಿ ಕೃಷ್ಣ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮನವಿ ಪತ್ರ ನೀಡುವಂತೆ ಸೂಚಿಸಿದರು.
ತುರ್ತು ಸಮಯಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಯೊಡನೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅಂದಾಜಿನ ಪ್ರಕಾರ ರಾಜ್ಯದಲ್ಲಿ 14 ಲಕ್ಷ ಅನಿವಾಸಿ ಕನ್ನಡಿಗರಿದ್ದು, ಪ್ರತ್ಯೇಕ ಸಚಿವಾಲಯ ಇದ್ದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬಹುದು.ಡಾ. ಆರತಿ ಕೃಷ್ಣ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ