ಶಿಕಾರಿಪುರದಲ್ಲಿ ದತ್ತು ಜಾಗೃತಿ ಜಾಥಾಕ್ಕೆ ತಾಪಂ ಇಒ ಎನ್.ಜಿ.ನಾಗರಾಜ್ ಚಾಲನೆ ನೀಡಿದರು. ವಿನಯ್ ಆರಾಧ್ಯ, ನೀಲಮ್ಮ, ಎಚ್.ಸಿ.ರಘುಕುಮಾರ್, ಜ್ಯೋತಿ, ದೀಪ್ತಿ ಇತರರಿದ್ದರು. 
ನ್ಯೂಸ್

ಮಕ್ಕಳ ದತ್ತು ಸ್ವೀಕಾರ ಕಾನೂನಿನ ಅರಿವಿರಲಿ

ಶಿಕಾರಿಪುರ: ಮಕ್ಕಳು ದೇಶದ ಆಸ್ತಿ. ಪ್ರತಿ ಮಗುವಿಗೂ ಸಂಸ್ಕಾರ ಮೌಲ್ಯಗಳನ್ನು ಕಲಿಸಿ ಸದೃಢ ದೇಶ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವ ಭಾವನೆ ಬೆಳೆಸಬೇಕು ಎಂದು ಉಪತಹಸೀಲ್ದಾರ್ ವಿನಯ್ ಆರಾಧ್ಯ ಹೇಳಿದರು.

ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಮಕ್ಕಳ ರಕ್ಷಣಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಪಂ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯು ಕಾನೂನಿನ ಪರಿಧಿಯೊಳಗೆ ಇರಬೇಕು. ದತ್ತು ಪಡೆಯುವಾಗ ಏನೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಅರಿವು ಇರಬೇಕು. ಇಂತಹ ಜಾಥಾಗಳು ಆ ಪ್ರಕ್ರಿಯೆಗೆ ಪೂರಕವಾಗಿ ಜಾಗೃತಿ ಮೂಡಿಸುತ್ತವೆ. ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಕ್ಕಳನ್ನು ವಿಶ್ವಮಾನವ ಸಂದೇಶದ ಆಧಾರದಲ್ಲಿ ಬೆಳೆಸಬೇಕು ಎಂದರು.

ತಾಪಂ ಇಒ ಎನ್.ಜಿ.ನಾಗರಾಜ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಎಚ್.ಸಿ.ರಘುಕುಮಾರ್, ಮೇಲ್ವಿಚಾರಕಿ ನೀಲಮ್ಮ, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವಿಕ್ಷಣಾಧಿಕಾರಿ ಜ್ಯೋತಿ ಶೆರ್ವೆಗಾರ್, ಜಿಲ್ಲಾ ಮಕ್ಕಳ ಸಹಾಯವಾಣಿ ವಿಷಯ ನಿರ್ವಾಹಕಿ ದೀಪ್ತಿ, ಸಾಂತ್ವನ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸ್ ಸಿಬ್ಬಂದಿ ಇದ್ದರು.