ರಾಜ್ಯದಲ್ಲಿ ಕರೊನಾ ಎರಡನೆಯ ಅಲೆಯ ಅಬ್ಬರ ತಗ್ಗಿದೆ. ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಕಠಿಣ ಲಾಕ್ಡೌನ್ ಜೂನ್ 14ರಂದು ಕೊನೆಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಐದು ಹಂತಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಕೈಗೊಳ್ಳಲಿದ್ದು, ಈ ಬಗ್ಗೆ ಕಂದಾಯ ಇಲಾಖೆ ಸಭೆ ನಡೆಸಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು (ಗುರುವಾರ) ನಡೆಯಲಿರುವ ಸಭೆಯಲ್ಲಿ ಲಾಕ್ಡೌನ್ ಸಡಿಲಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ ಅಂಗಡಿ, ಮಾರುಕಟ್ಟೆ, ಮಾಲ್ಗಳನ್ನು ನಿದಗಿತ ಅವಧಿಯಲ್ಲಿ ತೆರೆಯಲು ಅನುಮತಿ, ಎರಡನೇ ಹಂತದಲ್ಲಿ ಶೇಕಡ 50 ಆಸನ ಸಾಮರ್ಥ್ಯದೊಂದಿಗೆ ಸಾರಿಗೆ ಸಂಚಾರ, ಮೂರನೇ ಹಂತದಲ್ಲಿ ಸಭೆ, ಸಮಾರಂಭಗಳಿಗೆ ವಿನಾಯಿತಿ, ನಾಲ್ಕನೇ ಹಂತದಲ್ಲಿ ಸಿನಿಮಾ ಹಾಲ್ ಆರಂಭ, ಐದನೇ ಹಂತದಲ್ಲಿ ಪೂರ್ಣ ಅನ್ಲಾಕ್ ಮಾಡುವ ಯೋಚನೆ ಇದೆ. ತಜ್ಞರು ಮುಂದಿರಿಸಿರುವ ವರದಿ ಮತ್ತು ಸಂಭಾವ್ಯ ಮೂರನೆಯ ಅಲೆಯ ಅಪಾಯಗಳನ್ನು ಮನಗಂಡು ನಿರ್ಧಾರ ಕೈಗೊಳ್ಳಬೇಕಿದೆ.
ಲಾಕ್ಡೌನ್ ಸಡಿಲಿಕೆಯ ಹಂತದಲ್ಲಿ ಯಾವುದೇ ರ್ನಿಲಕ್ಷ$್ಯ ಅಥವಾ ತರಾತುರಿಯ ನಿರ್ಧಾರಕ್ಕೆ ಅವಕಾಶ ಮಾಡಿಕೊಡಬಾರದು. ಕರೊನಾ ಎರಡನೇ ಅಲೆ ಎಷ್ಟೊಂದು ಜೀವಹಾನಿ ಸೃಷ್ಟಿಸಿತು ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಹೇಗೆ ಅತೀವ ಒತ್ತಡ ಸೃಷ್ಟಿಸಿತು ಎಂಬುದು ಗೊತ್ತಿರುವಂಥದ್ದೇ. ಮೊದಲ ಅಲೆಯ ಹತ್ತು ತಿಂಗಳ ಅವಧಿಯಲ್ಲಿ ಆದ ಪ್ರಾಣಹಾನಿಗಿಂತ, ಎರಡನೇ ಅಲೆಯ ಎರಡು&ಮೂರು ತಿಂಗಳಲ್ಲೇ ಹೆಚ್ಚು ಜನರು ಮೃತಪಟ್ಟರು. ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸಭೆ, ಸಮಾರಂಭಗಳನ್ನು ನಡೆಸಿದ್ದರಿಂದ, ಸಾರ್ವಜನಿಕ ಪ್ರದೇಶಗಳಲ್ಲಿ ಸುರಾ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಈ ಬಾರಿ ಸೋಂಕು ನಗರಪ್ರದೇಶಗಳನ್ನು ದಾಟಿ ಹಳ್ಳಿಗಳಿಗೂ ಪ್ರವೇಶಿಸಿತು. ಎರಡು ಹಂತದ ಲಾಕ್ಡೌನ್ ಜಾರಿಗೆ ತರಬೇಕಾಯಿತು. ಪರಿಸ್ಥಿತಿ ಈಗ ಕೊಂಚ ನಿಯಂತ್ರಣಕ್ಕೆ ಬಂದಿದ್ದರೂ, ಅಪಾಯ ಪೂರ್ತಿ ಕಡಿಮೆಯಾಗಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆಗಳಿಗೆ ವಲಸೆ ಹೋಗಿದ್ದ ಜನರು ಲಾಕ್ಡೌನ್ ಅಂತ್ಯವಾಗುವ ಸುಳಿವು ಸಿಗುತ್ತಿದಂತೆ ರಾಜಧಾನಿಯತ್ತ ಮರಳುತ್ತಿದ್ದಾರೆ. ಜನದಟ್ಟಣೆ ಏರ್ಪಡದಂತೆ, ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕಿದೆ. ಮುಖ್ಯವಾಗಿ, ಸಭೆ, ಸಮಾರಂಭಗಳಿಗೆ ಒಂದಿಷ್ಟು ಸಮಯ ಅವಕಾಶ ನೀಡದಿರುವುದೇ ಒಳಿತು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಏಪ್ರಿಲ್&ಮೇ ತಿಂಗಳಲ್ಲಿ ನಡೆದ ಮದುವೆಗಳು ಸೋಂಕು ಪ್ರಸರಣದ ವೇಗವನ್ನು ಹೆಚ್ಚಿಸಿದ್ದವು. ಇಂಥ ಪ್ರಮಾದಗಳು ಮತ್ತೆ ಮರುಕಳಿಸಬಾರದು. ಕರೊನಾ ಇನ್ನಷ್ಟು ನಿಯಂತ್ರಣಕ್ಕೆ ಬರುವವರೆಗೆ ಜನರು ದೊಡ್ಡಸಂಖ್ಯೆಯಲ್ಲಿ ಸೇರದಂತೆ ನೋಡಿಕೊಳ್ಳಬೇಕು.
ಜನರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಒಂದು ಸಣ್ಣ ರ್ನಿಲಕ್ಷ$್ಯ ಅಥವಾ ಪ್ರಮಾದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಮುಖಗವಸು ಧರಿಸುವುದು, ಸುರತ ಅಂತರ ಕಾಪಾಡುವುದನ್ನು ಮರೆಯಬಾರದು. ಎಲ್ಲರ ಸಾಮೂಹಿಕ ಜವಾಬ್ದಾರಿ, ಹೊಣೆಗಾರಿಕೆಯಿಂದ ಮಾತ್ರ ಈ ಮಹಾಮಾರಿಯನ್ನು ನಿಯಂತ್ರಿಸಲು ಸಾಧ್ಯ ಎಂಬ ವಿವೇಚನೆಯೊಂದಿಗೆ ಮುಂದಿನ ಹೆಜ್ಜೆಯನ್ನು ಇಡಬೇಕಿದೆ.