ನ್ಯೂಸ್

ವೆಬ್​ನಲ್ಲಿ ವಧು-ವರಾನ್ವೇಷಣೆ ಮುನ್ನ ಎಚ್ಚರ: ಹಳ್ಳಕ್ಕೆ ಬೀಳುವ ಉದ್ಯೋಗಸ್ಥ ಯುವತಿ, ವಿಧವೆಯರು!

ಬೆಂಗಳೂರು: ವಧು-ವರಾನ್ವೇಷಣೆ ಜಾಲತಾಣಗಳಿಗೆ ವಂಚಕರ ಹಾವಳಿ ಹೆಚ್ಚಾಗಿದೆ. ಸುಂದರ ಯುವಕ, ಯುವತಿಯರ ಫೋಟೋ, ಪ್ರತಿಷ್ಠಿತ ಕಂಪನಿ ಕೆಲಸ, ಕೈತುಂಬ ವೇತನ, ವಿದೇಶದಲ್ಲಿ ವಾಸ್ತವ್ಯ ಎಂದು ನಂಬಿಸಿ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ.

ಬಣ್ಣಬಣ್ಣದ ಮಾತುಗಳಿಗೆ ಮರುಳಾಗುವರಿಂದ ಲಕ್ಷಾಂತರ ರೂ. ವಸೂಲಿ ಅಥವಾ ಸುತ್ತಾಡಿ ಕೊನೆಗೆ ಕೈ ಕೊಡುವರ ಕಿರಾತಕರು ಇದ್ದಾರೆ. ಕೆಲವರು ಮರ್ಯಾದೆಗೆ ಹೆದರಿ ವಂಚಕರ ವಿರುದ್ಧ ಠಾಣೆಗೆ ದೂರು ಕೊಡಲು ಹಿಂಜರಿಯುತ್ತಾರೆ. ಹಣ ಕಳೆದುಕೊಂಡವರು ದೂರು ಕೊಟ್ಟು ನ್ಯಾಯ ಕೊಡಿಸುವಂತೆ ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ.

ಇತ್ತೀಚೆಗೆ ಸೈಬರ್ ಕ್ರೖೆಂ ಠಾಣೆಗೆ ದೂರುಗಳು ಕೊಡುತ್ತಿದ್ದಾರೆ. ಕಳೆದ 3 ವರ್ಷಗಳಿಂದ ದಿನೇದಿನೆ ಮ್ಯಾಟ್ರಿಮೋನಿಯಲ್ ಜಾಲತಾಣದಿಂದ ವಂಚನೆಗೆ ಒಳಗಾದವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ 2017ರಲ್ಲಿ 20 ಪ್ರಕರಣಗಳು, 2018ರಲ್ಲಿ 45 ಮತ್ತು 2019ರ ಅಂತ್ಯಕ್ಕೆ 82 ಕೇಸು ದಾಖಲಾಗಿವೆ.

ದೇಶದಲ್ಲೇ ಕುಳಿತು ಅಮಾಯಕ ಹೆಣ್ಣು ಮಕ್ಕಳಿಗೆ ವಂಚಿಸುತ್ತಾರೆ. ಇಂತಹ ಕೃತ್ಯ ತಪ್ಪಿಸುವಂತೆ ವಧು-ವರಾನ್ವೇಷಣೆ ಸಂಸ್ಥೆಗಳಿಗೆ ಮಾರ್ಗಸೂಚಿ ಪಾಲನೆ ಮಾಡುವಂತೆ ಪತ್ರ ಬರೆದಿದ್ದರೂ ವಂಚಕರಿಗೆ ಕಡಿವಾಣ ಬಿದ್ದಿಲ್ಲ ಎಂದು ಸೈಬರ್ ಕ್ರೖೆಂ ಪೊಲೀಸರು ತಿಳಿಸಿದ್ದಾರೆ.

ಹತ್ತಿರದ ಸಂಬಂಧದಲ್ಲಿ ವಧು-ವರನ ಬದಲು ಅಥವಾ ಯಾರೂ ಸಿಗದೆ ಸಿಗದೆ ಇದ್ದಾಗ ಹೊಸ ಸಂಬಂಧ ಹುಡುಕಲು ಪಾಲಕರು ಬಯಸುತ್ತಾರೆ. ಕೆಲವರು ವಿದ್ಯಾವಂತ, ಒಳ್ಳೆಯ ನೌಕರಿ, ಶ್ರೀಮಂತರು, ಸುಂದರ ಇರುವರ ಜತೆ ಮದುವೆ ಮಾಡಿಕೊಳ್ಳುವ ಆಸೆಯಿಂದ ವಧು-ವರಾನ್ವೇಷಣೆ ಜಾಲತಾಣದ ಮೊರೆ ಹೋಗುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ವಂಚಕರು ಸುಂದರ ಯುವಕ, ಯುವತಿಯರ ಫೋಟೋ ಅಪ್​ಲೋಡ್ ಮಾಡಿ ವಿದೇಶದಲ್ಲಿ ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ, ಮದುವೆ ನಂತರ ಅಲ್ಲೇ ವಾಸ್ತವ್ಯ ಎಂದು ಹೇಳಿ ಸುಳ್ಳು ವಿಳಾಸ, ಮೊಬೈಲ್ ನಂಬರ್ ಹಾಕುತ್ತಾರೆ.

ಮೊಬೈಲ್​ಗೆ ಕರೆ ಮಾಡಿದಾಗ ನಾಜೂಕಾದ ಮಾತನಾಡಿ ಮತ್ತಷ್ಟು ಸುಳ್ಳಿನ ಕತೆ ಕಟ್ಟಿ ಅಮಾಯಕರನ್ನು ಮತ್ತು ಕುಟುಂಬಸ್ಥರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ.

ಮದುವೆಗೆ ಒಪ್ಪಿದಾಗ ವಿದೇಶದಲ್ಲಿ ವಾಸ್ತವ್ಯ ಹೂಡಬೇಕಾದರೆ ಪಾಸ್​ಫೋರ್ಟ್ ಮತ್ತು ವೀಸಾ ಮಾಡಿಸಬೇಕೆಂದು ಹಣ ವಸೂಲಿ ಮಾಡಿಕೊಳ್ಳುತ್ತಾರೆ. ಇಲ್ಲವಾದರೆ, ದುಬಾರಿ ಉಡುಗೊರೆ ಪಾರ್ಸೆಲ್ ಕಳುಹಿಸಿದ್ದೇನೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ತೆರಿಗೆ ಪಾವತಿಸಿ ಬಿಡಿಸಿಕೊಳ್ಳಿ ಎಂದು ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಂಡು ಸಂಪರ್ಕ ಕಡಿತ ಮಾಡುತ್ತಾರೆ.

ಉದ್ಯೋಗಸ್ಥ ಮಹಿಳೆಯರೇ ಹೆಚ್ಚು

ವಂಚಕರ ಬುಟ್ಟಿಗೆ ಬೀಳುವರಲ್ಲಿ ಉದ್ಯೋಗಸ್ಥ ಯುವತಿ ಅಥವಾ ವಿಧವೆಯರೇ ಹೆಚ್ಚು. ಪ್ರತಿಷ್ಠಿತ ಕಂಪನಿಗೆ ಕೆಲಸಕ್ಕೆ ಸೇರಿ ಕೈತುಂಬ ಸಂಬಳ ಪಡೆದು ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಕನಸು ಕಟ್ಟಿರುತ್ತಾರೆ. ಹೆತ್ತವರ ಮಾತು ಮೀರಿ ತಾಣಗಳಲ್ಲಿ ಬಾಳಸಂಗತಿ ಹುಡುಕಾಟ ನಡೆಸುತ್ತ ವಂಚಕನ ಬಲೆಗೆ ಸಿಲುಕಿ ತಮ್ಮ ಉಳಿತಾಯದ ಹಣವೆಲ್ಲ ಕಳೆದುಕೊಳ್ಳುತ್ತಾರೆ. ಇನ್ನು ಕೌಟುಂಬಿಕ ಕಲಹ ಅಥವಾ ಮತ್ಯಾವುದೊ ಕಾರಣಕ್ಕೆ ಪತಿಯಿಂದ ದೂರವಾಗಿ ಎರಡನೇ ವಿವಾಹಕ್ಕೆ ನಿರ್ಧರಿಸುವ ಮಹಿಳೆಯರು ಕೂಡ ವಂಚಕರ ಕೈಗೆ ಸಿಲುಕುತ್ತಿದ್ದಾರೆ. ಇದೆ ರೀತಿ ವಂಚಕಿಯರು ಅಮಾಯಕ ಯುವಕರ ತಲೆಕೆಡಿಸಿ, ಅರೆನಗ್ನ ಫೋಟೋ ಕಳುಹಿಸಿ ಜೀವನ ಪೂರ್ತಿ ಸಾಕುವುದಾಗಿ ಪ್ರಚೋದನೆ ಮಾಡಿ ಸಾಧ್ಯವಾದಷ್ಟು ಹಣ ಕಸಿದುಕೊಂಡು ಕೊನೆಗೊಂದು ದಿನ ಕೈಕೊಡುತ್ತಿದ್ದಾರೆ.

ಬಿಜಿನೆಸ್ ಸೋಗಿನಲ್ಲಿ ವಂಚನೆ

ಜಾಲತಾಣದಲ್ಲಿ ಪರಿಚಯನಾದ ವ್ಯಕ್ತಿ, ಮದುವೆ ಆಗುವುದಾಗಿ ನಂಬಿಸಿದ. ಮುಖಾಮುಖಿ ಭೇಟಿ ಮಾಡಿ ಸ್ಟೀಲ್ ಉದ್ಯಮಿ ಎಂದು 49 ವರ್ಷದ ವಿಧವೆಗೆ ನಂಬಿಸಿದ್ದ. ಮರು ದಿನ ಉದ್ಯಮದ ಮೇಲೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡ ಬೇಕೆಂದು ಆಕೆಯ ಬಳಿಯಿದ್ದ 70 ಗ್ರಾಂ ಚಿನ್ನ, 5 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ನೊಂದ ಮಹಿಳೆ, ಜೀವನ್​ಬಿಮಾನಗರ ಠಾಣೆಗೆ ದೂರು ನೀಡಿದ್ದಾರೆ.

ಕಾನೂನಿನಡಿ ಅವಕಾಶ ಇಲ್ಲ

ಜಾಹೀರಾತು ಸಂಸ್ಥೆಗಳ ಕಾನೂನಿನಡಿ ವಧು-ವರಾನ್ವೇಷಣೆ ತಾಣಗಳು ನೋಂದಣಿ ಮಾಡಿಸಿ ಕೊಂಡಿವೆ. ಅಂತರ್ಜಾಲದಲ್ಲಿ ಸಹ ಜಾಹೀರಾತು ಎಂದು ಪ್ರಕಟಣೆ ಮಾಡಿ ಮಧ್ಯಸ್ಥಿಕೆ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ಹಾಗಾಗಿ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಸೈಬರ್ ಕ್ರೖೆಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಎಚ್ಚರಿಕೆ ಸಂದೇಶ

  • ವಧು-ವರನ ಜತೆ ವ್ಯವಹರಿಸುವಾಗ ಎಚ್ಚರ
  • ಪಾಲಕರ ಸಮ್ಮುಖದಲ್ಲಿ ಮುಖಾಮುಖಿ ಭೇಟಿ ಒಳಿತು
  • ಒಂದಲ್ಲ, ಎರಡು ಬಾರಿ ಪೂರ್ವಪರ ಮಾಹಿತಿ ತಿಳಿಯಿರಿ
  • ಮದುವೆಗೂ ಮುನ್ನ ಹಣ, ಆಭರಣದ ವ್ಯವಹಾರ ಬೇಡ
  • ಭಾವನಾತ್ಮಕ ಮಾತುಗಳಿಗೆ ಮರುಳಾಗಬೇಡಿ

| ಗೋವಿಂದರಾಜು ಚಿನ್ನಕುರ್ಚಿ