ಡಾ. ಅರವಿಂದ್ 
ನ್ಯೂಸ್

ಶಿಕ್ಷಕರ ನಡೆ-ನುಡಿ ಮಾದರಿಯಾಗಿರಲಿ

ಶಿವಕುಮಾರ ಎಸ್.ಪಿ.

ಶಿಕಾರಿಪುರ: ಸದ್ವಿಚಾರಗಳು ಸೃಜಿಸುವಂತಹ ಶಿಕ್ಷಣ ನಮ್ಮದಾಗಬೇಕು. ಇದಕ್ಕಾಗಿ ಶಿಕ್ಷಕರ ಮಾತು, ನಡವಳಿಕೆಗಳು ವಿದ್ಯಾರ್ಥಿಗಳಿಗೆ ಸದಾ ಮಾದರಿಯಾಗಿರಬೇಕು ಎಂದು ನ್ಯೂರೋಸೈಕಿಯಾಟ್ರಿಸ್ಟ್ ಡಾ. ಎಸ್.ಟಿ.ಅರವಿಂದ್ ಹೇಳಿದರು.

ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ ಶಿಕ್ಷಣದಲ್ಲಿ ಸಲಹೆ ಮತ್ತು ಮಾರ್ಗದರ್ಶನದ ಪಾತ್ರ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಬೋಧನೆ ಮಾಡುವುದರ ಜತೆಗೆ ನಮ್ಮ ನಡತೆಯೇ ಮಾರ್ಗದರ್ಶನವಾಗಬೇಕು. ಮಕ್ಕಳಲ್ಲಿ ಧನಾತ್ಮಕ ಭಾವನೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಶಾಲೆಯಲ್ಲಿ ಮಕ್ಕಳ ಬುದ್ಧಿಶಕ್ತಿ, ಭಾವನಾತ್ಮಕ ಪ್ರಕ್ರಿಯೆಗಳಿಗೆ ಅನುಗುಣವಾಗಿ ನಾವು ವರ್ತಿಸಬೇಕು ಅವರನ್ನು ಸಮಾಜದ ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಬೇಕು. ಎಲ್ಲ ಕ್ಷೇತ್ರಗಳೂ ಪ್ರಮುಖವಾದವುಗಳು. ಆದರೆ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ. ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ನೀಡುವ ಗೌರವ ಅನನ್ಯ ಹಾಗೂ ಅನುಪಮ ಎಂದು ಅಭಿಪ್ರಾಯಪಟ್ಟರು.ಎಂದು ಹೇಳಿದರು.
ಮಕ್ಕಳು ಖಿನ್ನತೆಗೆ ಒಳಗಾಗುವ ಮನಸ್ಥಿತಿಯನ್ನು ತಿಳಿದು ಪ್ರೋತ್ಸಾಹಿಸುವುದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳು ಕೆಲವು ಮಾದಕ ವಸ್ತುಗಳ ಸೇವನೆ ಮಾಡುವುದನ್ನು ಕಾಣುತ್ತಿದ್ದೇವೆ. ಮಗುವು ತಮ್ಮೊಂದಿಗೆ ಮಾತನಾಡುವಾಗ ಅದು ಎದುರಿಸುವ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಾಗ ಧನಾತ್ಮಕವಾಗಿ ಆಲಿಸಿ, ಪರಿಹಾರವನ್ನು ನೀಡುವುದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಯೊಂದಿಗೆ ಮುಕ್ತವಾಗಿ ಮಾತನಾಡಬೇಕು. ಪ್ರಶ್ನಿಸುವ ಗುಣಗಳನ್ನು ಬೆಳೆಸಬೇಕು. ಆದರೆ ಮಗುವಿನ ಭಾವನೆಗೆ ಧಕ್ಕೆ ಆಗುವಂತೆ ಹೀಯಾಳಿಸಬಾರದು ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್, ಆಧುನಿಕ ಜೀವನಶೈಲಿಯಿಂದಾಗಿ ಇಂದು ಮಕ್ಕಳನ್ನು ಬೆಳೆಸುವುದು ತುಂಬ ಕಷ್ಟದ ಕೆಲಸ. ಇಂದು ಮನುಷ್ಯ ಹಣದ ಬೆನ್ನತ್ತಿದ್ದಾನೆ. ಆದರೆ ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಿದ್ದಾನೆ. ಇತ್ತೀಚಿನ ಜೀವನ ಶೈಲಿಯಿಂದ ಶೇ.10ರಷ್ಟು ಜನರು ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿರುವುದು ತಿಳಿದುಬಂದಿದೆ. ಧನಾತ್ಮಕ ಚಿಂತನೆ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದರು.
ಪಿಇಎಸ್ ಟ್ರಸ್ಟ್ ಆಪ್ತಸಮಾಲೋಚಕಿ ಎಸ್.ತನುಜಾ, ಸಂಸ್ಥೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಇದ್ದರು.