ಬೆಂಗಳೂರು: ಕಾಲೇಜಿನಲ್ಲಿ ನಡೆದ ಗಲಾಟೆ ವೇಳೆ ವಿದ್ಯಾರ್ಥಿಯೋರ್ವ ಹೊರಗಿನ ಸಹಚರರ ಗುಂಪು ಕಟ್ಟಿಕೊಂಡು ಬಂದು ಸಹಪಾಠಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಅನ್ನಪೂರ್ಣೇಶ್ವರಿ ನಗರ ಸಮೀಪದ ಪಾಪರೆಡ್ಡಿಪಾಳ್ಯದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಯೋಗೇಶ್ (19) ಕೊಲೆಯಾದ ವಿದ್ಯಾರ್ಥಿ. ಕೊಲೆ ಆರೋಪಿ ಹಾಗೂ ಆತನ ಸಹಚರರ ಗುಂಪು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎನ್.ಯತೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ಬೆಲೆ ಬಿಸಿದ್ದಾರೆ.
ಪಾಪರೆಡ್ಡಿಪಾಳ್ಯದ ಖಾಸಗಿ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದಲ್ಲಿ ಓದುತ್ತಿದ್ದ ಯೋಗೇಶ್ ಮತ್ತು ಸಹಪಾಠಿಯೋರ್ವನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಬುಧವಾರ ಕೂಡ ಗಲಾಟೆಯಾಗಿದೆ. ಇದೇ ಕೋಪದಿಂದ ಕಾಲೇಜು ಮುಕ್ತಾಯದ ಬಳಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯೋಗೇಶ್ ಹಿಂಬಾಲಿಸಿಕೊಂಡು ಹೋಗಿದ್ದ ಗುಂಪು ಏಕಾಏಕಿ ಚಾಕು ಇರಿದು ಪರಾರಿಯಾಗಿದೆ.
ಚಾಕು ಇರಿತದಿಂದ ತೀವ್ರಗಾಯಗೊಂಡಿದ್ದ ಯೋಗೇಶನನ್ನು ಸ್ನೇಹಿತರು ಹಾಗೂ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದಾರೆ. ವಿದ್ಯಾರ್ಥಿ ಕುಟುಂಬಸ್ಥರು ನೀಡಿದ ದೂರಿನನ್ವಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಯುವತಿ ವಿಚಾರವಾಗಿ ವಿದ್ಯಾರ್ಥಿಗಳಿಬ್ಬರ ನಡುವೆ ಗಲಾಟೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಯಾದ ಬಳಿಕ ಕೊಲೆ ಕುರಿತು ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.