ನ್ಯೂಸ್

ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ... ಕಡೆಗೂ ಸೇಡು ತೀರಿಸಿಕೊಂಡ BCCI! ಗೌತಿ ಬಲಗೈ ಬಂಟರಿಗೆ ಗೇಟ್​ಪಾಸ್​

ಮೋಹನ್​ ಶೆಟ್ಟಿ

BCCI: 2024-25ರ ಬಾರ್ಡರ್​ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ಕಳಪೆ ಪ್ರದರ್ಶನ ತೋರಿದ ಟೀಮ್ ಇಂಡಿಯಾ, ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರೀ ಮುಖಭಂಗ ಅನುಭವಿಸಿತು. 3-1 ಅಂತರದಿಂದ ಸೋತ ಭಾರತ, ನಾಯಕ ರೋಹಿತ್​, ವಿರಾಟ್​ ಕೊಹ್ಲಿ ಅವರಂತಹ ದಿಗ್ಗಜ ಕ್ರಿಕೆಟಿಗರಿಂದಲೇ ಕಳಪೆ ಬ್ಯಾಟಿಂಗ್ ಪ್ರದರ್ಶನ ಬಂದಿದ್ದು, ಮ್ಯಾನೇಜ್​ಮೆಂಟ್​ ಹಾಗೂ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು.

ಈ ಮಧ್ಯೆ ಸರಣಿಯಲ್ಲಿ ತೊಡಗಿರುವಾಗ ಡೆಸ್ಸಿಂಗ್ ರೂಮ್​ನಲ್ಲಿ ನಡೆದ ಸಂಭಾಷಣೆಯನ್ನು ಸೋರಿಕೆ ಮಾಡಿದ ವಿಚಾರ  ಬಿಸಿಸಿಐ ಗಮನಕ್ಕೆ ಬಂದಿತ್ತು. ಆದರೆ, ಅಂದು ದಿಢೀರ್​ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ, ಇಂದು ಕೋಚ್ ಗೌತಮ್ ಗಂಭೀರ್ ಅವರ ಬಲಗೈ ಬಂಟರಾದ ಸಹಾಯಕ ಕೋಚ್ ಅಭಿಷೇಕ್ ನಾಯರ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಸ್ಟ್ರೆಂತ್ ಹಾಗೂ ಕಂಡೀಷನಿಂಗ್ ಕೋಚ್ ಆದ ಸೋಹಮ್ ದೇಸಾಯಿರನ್ನು ಬಿಸಿಸಿಐ ಕರ್ತವ್ಯದಿಂದ ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಈ ವರ್ಷದ ಜೂನ್ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನವೇ ಬಿಸಿಸಿಐ ತನ್ನ ಸೇಡನ್ನು ತೀರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಅಭಿಷೇಕ್ ನಾಯರ್​ ಅವರ ಸ್ಥಾನಕ್ಕೆ ಶೀಘ್ರವೇ ಹೊಸಬರು ಟೀಮ್ ಇಂಡಿಯಾ ತಂಡವನ್ನು ಸೇರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈ ಮಧ್ಯೆ ಬಿಸಿಸಿಐ ನಾಯರ್ ಮತ್ತು ದಿಲ್ಲಿಪ್ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಲಿದೆಯಾ? ಅಥವಾ ಹೀಗೇ ಮುಂದುವರಿಯಲಿದೆಯಾ? ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).