ನ್ಯೂಸ್

ODI World Cup 2023: ರಜನೀಕಾಂತ್‌ಗೆ 'ಗೋಲ್ಡನ್ ಟಿಕೆಟ್' ನೀಡಿದ ಜಯ್ ಶಾ

ತಮಿಳುನಾಡು: ಮುಂದಿನ ತಿಂಗಳು 5 ರಿಂದ ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್‌ನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಅವರು 'ಗೋಲ್ಡನ್ ಟಿಕೆಟ್' ಸ್ವೀಕರಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಚೆನ್ನೈನಲ್ಲಿರುವ ರಜನಿ ಮನೆಗೆ ತೆರಳಿ ಈ ಗೋಲ್ಡನ್ ಟಿಕೆಟ್ ಹಸ್ತಾಂತರಿಸಿದ್ದಾರೆ.

ಈ ಮೆಗಾ ಈವೆಂಟ್ ಅನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಮತ್ತು ಐಸಿಸಿ ವಿನೂತನ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇದರ ಭಾಗವಾಗಿ ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಜೈ ಶಾ ಈ ಗೋಲ್ಡನ್ ಟಿಕೆಟ್ ಗಳನ್ನು ನೀಡಿದ್ದಾರೆ. ಇದೀಗ ಜೈ ಶಾ ರಜನಿಕಾಂತ್‌ಗೆ ಈ ಟಿಕೆಟ್ ನೀಡಿದರು.

ಈ ಗೋಲ್ಡನ್ ಟಿಕೆಟ್ ಪಡೆದ ಸೆಲೆಬ್ರಿಟಿಗಳು ವಿಐಪಿ ಲಾಂಜ್‌ನಲ್ಲಿ ಕುಳಿತು ಉಚಿತವಾಗಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದು. ರಜನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿದ ನಂತರ, ಜೈ ಶಾ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಈ ವಿಷಯ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿರುವ ತಲೈವಾ ಅವರನ್ನು ಏಕದಿನ ವಿಶ್ವಕಪ್ ವೀಕ್ಷಿಸಲು ಸ್ವಾಗತಿಸಲಾಗಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಸೆಲೆಬ್ರಿಟಿಗಳಿಗೆ ಗೋಲ್ಡನ್ ಟಿಕೆಟ್ ನೀಡುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಬಿಸಿಸಿಐ, ಐಸಿಸಿ, ಸೆಲೆಬ್ರಿಟಿಗಳು ಬುಕ್ಕಿಂಗ್ ಆ್ಯಪ್‌ಗಳಲ್ಲಿ ಟಿಕೆಟ್‌ಗಾಗಿ ಹುಡುಕುತ್ತಿರುವಾಗ ತಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗವಾಸ್ಕರ್ ಬಿಸಿಸಿಐ (ಗೋಲ್ಡನ್ ಟಿಕೆಟ್ ) ತೆಗೆದುಕೊಂಡಿರುವ ಈ ನಿರ್ಧಾರ ಬಹಳ ಶ್ರೇಷ್ಠವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾದವರಿಗೆ ನೀಡಿ ಗೌರವಿಸುವುದು ಉತ್ತಮ ವಿಚಾರ. ಇಲ್ಲಿಯವರೆಗೆ ಅಮಿತಾಭ್ ಬಚ್ಚನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್ ನೀಡಲಾಗಿದೆ. ಅಲ್ಲದೆ ಟೀಂ ಇಂಡಿಯಾಗೆ ಏಕದಿನ ವಿಶ್ವಕಪ್ ನೀಡಿದ ಕಪಿಲ್ ದೇವ್ ಮತ್ತು ಧೋನಿಗೂ ಇವುಗಳನ್ನು ನೀಡಬೇಕು. ಇದಲ್ಲದೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೂ ಕೊಡಬೇಕು. ಅವರು ಸಂಪೂರ್ಣವಾಗಿ ಅರ್ಹರು ಎಂದು ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಹಲವರ ಹೆಸರು ಇವೆ. ಆದರೆ ಈ ಪೈಕಿ ಇಸ್ರೋ ಮುಖ್ಯಸ್ಥರಿಗೆ ಗೋಲ್ಡನ್ ಟಿಕೆಟ್ ಹಸ್ತಾಂತರಿಸಲಾಗಿದೆ.