ಬೆಂಗಳೂರು: ಸೆಪ್ಟೆಂಬರ್ 15ರ ಒಳಗಾಗಿ ಬಿಬಿಎಂಪಿ ವಿಭಜನೆ ಪೂರ್ಣ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಗೆ ಸರ್ಕಾರ ನಿರ್ಧರಿಸಿದೆ. ಈ ಬೆನ್ನಲ್ಲೆ ುಟ್‌ಪಾತ್ ಅಂಗಡಿಗಳನ್ನು ತೆರವು ಮತ್ತು ರಸ್ತೆ ಅಗಲೀಕರಣಕ್ಕೂ ಚಾಲನೆ ನೀಡಲು ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ಶನಿವಾರ ವಿಧಾನಸೌಧದಲ್ಲಿ ಬೆಂಗಳೂರಿನ ಎಲ್ಲ ಶಾಸಕರು ಮತ್ತು ಅಧಿಕಾರಿಗಳ ಜತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿ ಚರ್ಚೆ ನಡೆಸಿದರು. ಆನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಮೇ 15ರಿಂದ ಗ್ರೇಟರ್ ಬೆಂಗಳೂರು ಯಾಗಿ ಪರಿವರ್ತನೆಗೆ ಅಧಿಸೂಚನೆ ಹೊರಡಿಸಲಾಗಿದೆ. 120 ದಿನಗಳಲ್ಲಿ ಪಾಲಿಕೆಗಳನ್ನು ರಚನೆ ಮಾಡಲು ಶಾಸಕರ ಸಲಹೆ ಕೇಳಿದ್ದೇವೆ. ಎಲ್ಲೆಲ್ಲಿ ವಿಸ್ತರಣೆ ಮಾಡಬೇಕೆಂದು ತೀರ್ಮಾನ ಮಾಡಲಾಗುತ್ತದೆ. ಸೆಪ್ಟೆಂಬರ್ 15ರ ಒಳಗಾಗಿ ಗ್ರೇಟರ್ ಬೆಂಗಳೂರು ರಚನೆ ಆಗಲಿದೆ ಎಂದು ಭರವಸೆ ನೀಡಿದರು.
ಮಳೆ ನೀರು ಪೀಡಿತ ಪ್ರದೇಶಗಳ ಶಾಸಕರ ಜತೆ ಚರ್ಚೆ ಮಾಡಿ ತುರ್ತು ಕೆಲಸ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ಸರ್ಕಾರದಿಂದ ಹಣ ನೀಡಲಾಗುತ್ತದೆ. ಫುಟ್‌ಪಾತ್ ಅಂಗಡಿ ತೆರವಿಗೆ ನಿರ್ಧರಿಸಿದ್ದು, 27,665 ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗೆ ತಳ್ಳುವ ವಾಹನ ನೀಡಲು ಸಿದ್ಧರಿದ್ದೇವೆ. 3,755 ವ್ಯಾಪಾರಿಗಳು ವಾಹನ ಬೇಕೆಂದು ಮನವಿ ಮಾಡಿದ್ದು, ನಿಗದಿತ ಜಾಗದಲ್ಲಿ ವ್ಯಾಪಾರ ಮಾಡಬೇಕು.
ಎಲ್ಲೆಲ್ಲಿ ರಸ್ತೆ ಅಗಲೀಕರಣ ಆಗಬೇಕೆಂದು ಶಾಸಕರು ಶಿಫಾರಸು ಮಾಡುತ್ತಾರೋ ಆ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲಾಗುತ್ತದೆ. ಆಪ್ಟಿಕಲ್ ಕೇಬಲ್ಗಳನ್ನು ಸೀವೇಜ್ ಮತ್ತು ನೀರು ಗಾಲುವೆಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅಕ್ರಮ ಕೇಬಲ್ಗಳನ್ನು ಕತ್ತರಿಸಿ ಹಾಕಲು ಸೂಚಿಸಿದ್ದೆನೆ. ಚರಂಡಿಗಳಲ್ಲಿ ಹೂಳು ಎತ್ತಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಡಿಕೆಶಿ ತಿಳಿಸಿದ್ದಾರೆ.