ನ್ಯೂಸ್

ತೆರಿಗೆ ಸುಸ್ತಿದಾರರಿಗೆ ಬಿಬಿಎಂಪಿ ನೋಟಿಸ್

rameshapm

ಪ್ರತಿ ಸಹಾಯಕ ಕಂದಾಯ ಅಧಿಕಾರಿಗಳೂ ತಮ್ಮ ವ್ಯಾಪ್ತಿವಾರು ಮತ್ತು ವಲಯ ವ್ಯಾಪ್ತಿವಾರು ಕಂದಾಯ ವಸೂಲಾತಿಯ ಗುರಿ ನಿಗದಿ ಮಾಡಬೇಕು. ಈ ಅರ್ಥಿಕ ವರ್ಷದ ನಾಲ್ಕು ತಿಂಗಳಲ್ಲಿ ನಿರೀಕ್ಷೆಯಂತೆ 1,500 ಕೋಟಿ ರೂ. ಸಂಪನ್ಮೂಲ ಸಂಗ್ರಹ ಗುರಿ ಮುಟ್ಟಬೇಕು. ವಲಯವಾರು ಟಾಪ್ 5 ಹಾಗೂ 10 ಲಕ್ಷ ರೂ. ಮೇಲ್ಪಟ್ಟ ಮೊತ್ತದ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಿ ನೋಟಿಸ್ ನೀಡಿ ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಸೂಚಿಸಿದ್ದಾರೆ.

ಬಿಬಿಎಂಪಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ವಸೂಲಾತಿ, ಸಂಪನ್ಮೂಲ ಕ್ರೂಢಿಕರಣ, ಸುಸ್ತಿದಾರರಿಂದ ಬಾಕಿ ಇರುವ ತೆರಿಗೆ ವಸೂಲಾತಿ ಇನ್ನಿತರೆ ವಿಷಯಗಳ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.

ರಸ್ತೆ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರೆ ಸೇವೆಗಳನ್ನು ಒದಗಿಸಲು ಸಂಪನ್ಮೂಲ ಕ್ರೂಢಿಕರಣದ ಅವಶ್ಯಕತೆ ಹೆಚ್ಚಿದೆ. ಅದಕ್ಕೆ ಕಂದಾಯ ಇಲಾಖೆ ಬಹುಮುಖ್ಯ ಪಾತ್ರವಹಿಸಬೇಕಿದೆ. ಕಂದಾಯ ಅಧಿಕಾರಿಗಳು ಪ್ರಮುಖ 3 ಅಂಶಗಳಾದ ಆಸ್ತಿ ತೆರಿಗೆ ಬಾಕಿ ವಸೂಲಾತಿ, ಕಡಿಮೆ ಮೌಲ್ಯಮಾಪನವಾಗಿರುವ ಸ್ವತ್ತುಗಳು, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳ ಮೇಲೆ ವಿಶೇಷ ಗಮನವಹಿಸಿ ತೆರಿಗೆ ವಸೂಲು ಮಾಡಬೇಕು.

ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ತೆರಿಗೆ ವಸೂಲಿ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು. ಸಹಾಯಕ ಕಂದಾಯ ಅಧಿಕಾರಿಗಳ ವ್ಯಾಪ್ತಿವಾರು ಟಾಪ್ 5 ಸುಸ್ತಿದಾರರ ಮತ್ತು 10 ಲಕ್ಷ ರೂ.ಗಳಿಗಿಂತ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ಸಿದ್ದಪಡಿಸಿ ನೊಟಿಸ್ ನೀಡಬೇಕು. ನಂತರ ವಾರಂಟ್ ಜಾರಿಗೊಳಿಸಿ ಬಾಕಿ ವಸೂಲಾತಿ ಮಾಡಬೇಕು.

ನಿಗಧಿಗೊಳಿಸಿರುವ ಗುರಿಯಲ್ಲಿ ಎಷ್ಟು ವಸೂಲಾತಿ ಮಾಡಲಾಗಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಪ್ರಸಕ್ತ ಆರ್ಥಿಕ ವರ್ಷ ಮುಕ್ತಾಯವಾಗಲು ನಾಲ್ಕು ತಿಂಗಳು ಉಳಿದಿದ್ದು, ಈ ಕಾಲಾವಧಿಯಲ್ಲಿ ನಿರೀಕ್ಷಿತ ಗುರಿಯಂತೆ 1,500 ಕೋಟಿ ರೂ. ಸಂಪನ್ಮೂಲ ಕ್ರೂಢಿಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕಂದಾಯ ವಿಭಾಗ ವಿಶೇಷ ಆಯುಕ್ತ ಬಸವರಾಜು, ಎಲ್ಲಾ ವಲಯದ ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.