ನ್ಯೂಸ್

ನೆರೆ ಹಿಂದೆ ಬಿಬಿಎಂಪಿ ನಿರ್ಲಕ್ಷ್ಯ

ಬೆಂಗಳೂರು: ಮಳೆ ಬಂದಾಗ ರಾಜಧಾನಿಯನ್ನು ಕಾಡುವ ಸಂಚಾರ ದಟ್ಟಣೆ ಸಮಸ್ಯೆ ಹಿಂದೆ ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇರುವ ವಿಚಾರ ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಾದ ಸಮಸ್ಯೆ ಇದಕ್ಕೊಂದು ತಾಜಾ ಉದಾಹರಣೆ.

ಮಳೆ ಬಂದಾಗ ನಗರದ ಯಾವೆಲ್ಲ ಪ್ರದೇಶಗಳಲ್ಲಿ ನೀರು ನಿಲ್ಲಲಿದೆ ಎಂಬುದನ್ನು ಜೂನ್, ಜುಲೈನಿಂದಲೇ ಸಂಚಾರ ವಿಭಾಗದ ಪೊಲೀಸರು ಗುರುತಿಸಿದ್ದಾರೆ. ನೀರು ನಿಲ್ಲುವ 180 ಸ್ಥಳಗಳ ಫೋಟೋ, ಲೋಕೇಷನ್‌ಗಳನ್ನೊಳಗೊಂಡ ಸಮಗ್ರ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿ ಅಗತ್ಯ ಕ್ರಮಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸದ್ದರಿಂದ ಮಳೆ ಅವಾಂತ ಕಾಡುತ್ತಿದೆ.

ಯಾವೆಲ್ಲ ಸ್ಥಳ ಗುರುತು?

ಭದ್ರಪ್ಪ ಲೇಔಟ್, ನಾಗವಾರ, ವೀರಣ್ಣನಪಾಳ್ಯ, ಹೆಬ್ಬಾಳ ಫ್ಲೈಓವರ್ ಕೆಳಗೆ ಸೇರಿ ಮಳೆ ನೀರು ನಿಲ್ಲುವ 180 ಸ್ಥಳಗಳನ್ನು ಗುರುತಿಸಿದ್ದರು. ರಸ್ತೆ ಗುಂಡಿಗಳ ಮಾಹಿತಿ ಮತ್ತು ಸರ್ವೀಸ್ ರಸ್ತೆಯಲ್ಲಿನ ಅಡಚಣೆ ಮತ್ತು ವಿಳಂಬ ಆಗುತ್ತಿರುವ ಕಾಮಗಾರಿಗಳ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಸ್ಥಳಕ್ಕೆ ಬಾರದ ಅಧಿಕಾರಿಗಳು

ಭಾರಿ ಮಳೆ, ಗಾಳಿ ಸಂದರ್ಭಗಳಲ್ಲಿ ನೀರು ಚರಂಡಿಗೆ ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿ ನಿಂತಾಗ ಅಥವಾ ಮರ ಬಿದ್ದಾಗ ತಕ್ಷಣ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರುವುದೇ ಇಲ್ಲ. ಸೋಮವಾರ ಬೆಳಗಿನ ಜಾವ ಉಂಟಾದ ಮಳೆ ನೀರು ಅವಾಂತರ ಪರಿಹರಿಸುವ ಕಾರ್ಯದಲ್ಲಿ ಸಂಚಾರ ಪೊಲೀಸರೇ ತೊಡಗಿದ್ದ ವಿಡಿಯೋ ಮತ್ತು ೆಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿ ಮುಚ್ಚುವುದು ಮತ್ತು ನೀರು ಬ್ಲಾಕ್ ಆದಾಗ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಬಂದು ಕೆಲಸ ಮಾಡುವುದು ದೇಶದ ಮಹಾನಗರಗಳಲ್ಲಿ ಕಾಣುತ್ತೆವೆ. ಬೆಂಗಳೂರಿನಲ್ಲಿ

ಪೊಲೀಸರೇ ಈ ಕೆಲಸ ಮಾಡುತ್ತಿರುವುದು ಶೋಚನೀಯ ಸಂಗತಿ ಎಂದು ಕಿಡಿಕಾರಿದ್ದಾರೆ.