ನ್ಯೂಸ್

ಬಿಬಿಎಂಪಿ ಕಸದ ಲಾರಿಗೆ ಟೆಕ್ಕಿಗಳು ಬಲಿ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ.

ಬಾಣಸವಾಡಿಯ ಪ್ರಶಾಂತ್ (25) ಮತ್ತು ಆಂಧ್ರ ಪ್ರದೇಶದ ಹಿಂದುಪುರ ಮೂಲದ ಶಿಲ್ಪಾ (27) ಮೃತರು. ಕೆ.ಆರ್. ವೃತ್ತದ ಬಳಿ ಭಾನುವಾರ ರಾತ್ರಿ 9 ಗಂಟೆಗೆ ಅವಘಡ ಸಂಭವಿಸಿದೆ. ಕಸದ ಲಾರಿ ಚಾಲಕ ರಾಜಪ್ಪನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿಪಿಎಲ್‌ನ ಟಿಸಿಎಸ್ ಕಂಪನಿಯಲ್ಲಿ ಪ್ರಶಾಂತ್ ಮತ್ತು ಶಿಲ್ಪಾ ಕೆಲಸ ಮಾಡುತ್ತಿದ್ದರು. ನಾಗವಾರದ ಪಿ.ಜಿ.ಯಲ್ಲಿ ಶಿಲ್ಪಾ ನೆಲೆಸಿದ್ದರು. ಸ್ನೇಹಿತರಾಗಿದ್ದ ಇಬ್ಬರು ಹಾರ್ಲಿ ಡೇವಿಡ್‌ಸನ್‌ನಲ್ಲಿ ಮೆಜೆಸ್ಟಿಕ್‌ನ ಹೋಟೆಲ್‌ಗೆ ಬಂದು ಊಟ ಮಾಡಿಕೊಂಡು ಶೇಷಾದ್ರಿ ರಸ್ತೆ ಮಾರ್ಗವಾಗಿ ಕೆ.ಆರ್. ವೃತ್ತದತ್ತ ಹೊರಟಿದ್ದರು. ಇದೇ ವೇಳೆ ಸಿಐಡಿ ಜಂಕ್ಷನ್ ಕಡೆಯಿಂದ ವೇಗವಾಗಿ ಬಂದ ಬಿಬಿಎಂಪಿ ಲಾರಿ, ಶೇಷಾದ್ರಿ ರಸ್ತೆಗೆ ತಿರುವು ಪಡೆಯುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ, ಪ್ರಶಾಂತ್ ಮತ್ತು ಶಿಲ್ಪಾ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಮಾರ್ಗಮಧ್ಯೆಯೇ ಗಾಯಾಳುಗಳು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಅಪಘಾತದ ಬಳಿಕ ಚಾಲಕ ಕಸದ ಲಾರಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದ. ಸೋಮವಾರ ಲಾರಿ ಚಾಲಕ ರಾಜಪ್ಪನನ್ನು ಬಂಧಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಚಾಲಕ ಮದ್ಯಪಾನ ಮಾಡಿದ್ದನೆ ಅಥವಾ ಇಲ್ಲವೆ ಎಂಬುದನ್ನು ತಿಳಿಯಲು ಆತನ ರಕ್ತದ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.