ನ್ಯೂಸ್

ನನೆಗುದಿಗೆ ಬಿದ್ದ ಬಿಬಿಎಂಪಿ ತನಿಖೆ, ಸಮೀಕ್ಷೆಗಳು: ಸಾವು ವಿಶ್ಲೇಷಣಾ ವರದಿ ಹೊರಬಂದಿಲ್ಲ

suchetana

| ಸತೀಶ್ ಕಂದಗಲ್​ಪುರ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳ ತನಿಖೆಗೆ ಅಥವಾ ಯಾವುದಾದರೂ ವಿಚಾರದ ಕುರಿತ ಸಮೀಕ್ಷೆಗಳು ಆರಂಭವಾದರೆ ನಿಗದಿತ ಕಾಲಮಿತಿಯಲ್ಲಿ ಮುಗಿಯುವುದಿಲ್ಲ. ಸಮೀಕ್ಷೆ ಪೂರ್ಣಗೊಂಡರೂ ವರದಿ ಮಾತ್ರ ಬಹಿರಂಗವಾಗುವುದಿಲ್ಲ.

ರಾಜಧಾನಿಯ ಆಡಳಿಯ ಸಂಸ್ಥೆಯಾದ ಬಿಬಿಎಂಪಿ ಸಾರ್ವಜನಿಕ ಸೇವೆ, ಮೂಲ ಸೌಕರ್ಯ ಒದಗಿಸುವ ಕಾರ್ಯಕ್ಕೆ ವಾರ್ಷಿಕ 10 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ, ಸಾರ್ವಜನಿಕ ಕಾಮಗಾರಿ ಕೈಗೊಳ್ಳುವಾಗ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಕ್ರಮ ಅಥವಾ ಭ್ರಷ್ಟಾಚಾರದ ಮೂಲಕ ಕೋಟ್ಯಂತರ ರೂ. ಲೂಟಿ ಮಾಡುವುದಕ್ಕೆ ಕಡಿವಾಣವೇ ಬೀಳುತ್ತಿಲ್ಲ. ಪ್ರತಿವರ್ಷ ಪಾಲಿಕೆ ಅಧಿಕಾರಿಗಳು ಮಾಡುವ ಭ್ರಷ್ಟಾಚಾರ ಸಂಬಂಧಿತ ತನಿಖೆಗಳನ್ನು ನಡೆಸಲು ಆಯುಕ್ತರ ನೇತೃತ್ವದ ತಾಂತ್ರಿಕ ಜಾಗರೂಕ ಸಮಿತಿ (ಟಿವಿಸಿಸಿ) ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್)ಗೆ ವಹಿಸಲಾಗುತ್ತದೆ. ಆದರೆ, ವಾರ್ಷಿಕ ಸಾವಿರಾರು ರೂ. ತೆರಿಗೆ ಕಟ್ಟುವ ಸಾರ್ವಜನಿಕರಿಗೆ ಮಾಹಿತಿಯೇ ಲಭ್ಯವಾಗುವುದಿಲ್ಲ. ಅಧಿಕಾರಿಗಳನ್ನು ಕೇಳಿದಲ್ಲಿ ಒಬ್ಬರ ಮೇಲೊಬ್ಬರು ಜವಾಬ್ದಾರಿ ವರ್ಗಾಯಿಸುತ್ತಾರೆ.

ಸಾವು ವಿಶ್ಲೇಷಣಾ ವರದಿ ನಾಪತ್ತೆ:

ನಗರದಲ್ಲಿ ಕೋವಿಡ್ 2ನೇ ಅಲೆ ಉತ್ತುಂಗಕ್ಕೆ ತಲುಪಿದ ಅವಧಿಯಲ್ಲಿ (ಮೇ 2 ರಿಂದ ಮೇ 17) ಸೋಂಕು ದೃಢಪಟ್ಟು ಮನೆಯಲ್ಲಿಯೇ ಆರೈಕೆಗೆ ಒಳಗಾಗಿದ್ದ 778 ಮಂದಿ ಸಾವನ್ನಪ್ಪಿದ್ದರು. ಈ ಬಗ್ಗೆ ಸಾವು ನಿಯಂತ್ರಣಕ್ಕೆ ರಚಿಸಲಾಗಿದ್ದ ಕೋವಿಡ್ ಸಾವು ವಿಶ್ಲೇಷಣಾ ಸಮಿತಿಗೆ (ಡೆತ್ ಅನಾಲಿಸಿಸ್ ಕಮಿಟಿ) ಪಾಲಿಕೆ ಆಯುಕ್ತರು ಸೂಚಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದಾಗ ಜೂ.15ರ ಒಳಗಾಗಿ ವರದಿ ನೀಡುವುದಾಗಿ ತಿಳಿಸಲಾಗಿತ್ತು. ನಿಗದಿತ ವೇಳೆಗಿಂತ 2 ತಿಂಗಳು ತಡವಾಗಿ ಆ.26ಕ್ಕೆ ಪಾಲಿಕೆ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲಾಯಿತು. ಆದರೆ, ಈ ವರದಿಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರಿಂದ ಪರಿಶೀಲನೆ ಮಾಡಿ ಸಾಧಕ-ಬಾಧಕ ಜನರ ಮುಂದಿಡಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದರು. ಆದರೆ, 4 ತಿಂಗಳಾದವರೂ ಸಾವು ವಿಶ್ಲೇಷಣಾ ವರದಿಯಲ್ಲಿರುವ ಅಂಶಗಳು ಬಹಿರಂಗವಾಗಲಿಲ್ಲ.

ಶಿಥಿಲ ಕಟ್ಟಡಗಳ ಸಮೀಕ್ಷಾ ವರದಿ ಅಸ್ಪಷ್ಟ:

ನಗರದಲ್ಲಿ ಸೆ.27 ರಂದು ಲಕ್ಕಸಂದ್ರದ 2 ಮಹಡಿಯ ಹಳೆಯ ಕಟ್ಟಡ ಕುಸಿತವಾದ ತಕ್ಷಣ ಪ್ರತಿ 2 ದಿನಗಳಿಗೊಂದು ಕಟ್ಟಡ ಕುಸಿಯಲು ಆರಂಭವಾಯಿತು. ಹೀಗಾಗಿ, ಅ.29ರಂದು ಕೆಎಂಎಫ್ ಕಚೇರಿ ಆವರಣದಲ್ಲಿನ 3 ಮಹಡಿ ವಸತಿ ಗೃಹವೂ ಮಳೆಗೆ ಕುಸಿತವಾಯಿತು. ತಕ್ಷಣವೇ ಎಚ್ಚೆತ್ತುಕೊಂಡ ಪಾಲಿಕೆ ಅ.14ರೊಳಗೆ (ಹದಿನೈದು ದಿನ ಗಡುವು) ನಗರದ 8 ವಲಯಗಳಲ್ಲಿ ಶಿಥಿಲಗೊಂಡ ಕಟ್ಟಡಗಳ ಸಮೀಕ್ಷಾ ವರದಿ ಸಿದ್ಧಪಡಿಸಲು ಗುರಿ ಹಾಕಿಕೊಳ್ಳಲಾಗಿತ್ತು. ಅ.18ಕ್ಕೆ 404 ಹೊಸ ಶಿಥಿಲ ಕಟ್ಟಡಗಳಿವೆ ಎಂದು ಗುರುತಿಸಲಾಯಿತು. ಇನ್ನು 2019ರಲ್ಲಿ ಗುರುತಿಸಲಾಗಿದ್ದ 185 ಶಿಥಿಲ ಕಟ್ಟಡಗಳು ಸೇರಿ ಒಟ್ಟು 589 ಶಿಥಿಲ ಕಟ್ಟಡಗಳ ಪಟ್ಟಿ ಮಾಡಲಾಗಿದೆ ಎಂದು ಪಾಲಿಕೆ ಮಾಹಿತಿ ನೀಡುತ್ತಿದೆ. ಆದರೆ, ವಲಯವಾರು ಎಷ್ಟು ಶಿಥಿಲ ಕಟ್ಟಡಗಳಿವೆ ಎಂಬ ಬಗ್ಗೆ ಬಿಬಿಎಂಪಿಯಿಂದ ಅಧಿಕೃತ ಮಾಹಿತಿ ಈವರೆಗೂ ಹೊರಬಿದ್ದಿಲ್ಲ.

ಮುಚ್ಚಿ ಹೋಯಿತೇ ಕಳಪೆ ಸ್ವೆಟರ್ ಸರಬರಾಜು ತನಿಖೆ:

ಬಿಬಿಎಂಪಿ ಶಾಲಾ-ಕಾಲೇಜು ಮಕ್ಕಳಿಗೆ ಸ್ವೆಟರ್ ಪೂರೈಕೆ ಟೆಂಡರ್ ಪಡೆದಿದ್ದ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 1.72 ಕೋಟಿ ರೂ. ಬಿಡುಗಡೆ ಮಾಡಿರುವ ವಿಚಾರದ ಬಗ್ಗೆ ಶಿಕ್ಷಣ ವಿಭಾಗದಿಂದ ಸಮಗ್ರ ವರದಿ ನೀಡುವಂತೆ ಆ.25ರಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದ್ದರು. ಈ ಬಗ್ಗೆ ವರದಿ ಸಲ್ಲಿಕೆಯಾದರೂ ಸ್ಪಷ್ಟ ಮಾಹಿತಿ ಪಾರದರ್ಶಕವಾಗಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಸಿ.ಎಸ್. ರಘು ಮುಖ್ಯಮಂತ್ರಿಗೆ ದೂರು ನೀಡಿದ್ದರು. ಈ ಬಗ್ಗೆ ಸರ್ಕಾರದಿಂದ ಕಳಪೆ ಸ್ವೆಟರ್ ಪೂರೈಕೆ ವಿಚಾರವಾಗಿ ಟಿವಿಸಿಸಿ ತನಿಖೆ ನಡೆಸುವಂತೆ ಸೆ.16 ರಂದು ಸೂಚನೆ ನೀಡಲಾಗುತ್ತದೆ. ಆದರೆ, ತನಿಖೆಗೆ ವಹಿಸಿ ಒಂದೂವರೆ ತಿಂಗಳಾದರೂ ವರದಿ ಸಾರ್ವಜನಿಕರಿಗೆ ಬಹಿರಂಗವಾಗುತ್ತಿಲ್ಲ.

ಪಿಪಿಪಿ ಜಾಹೀರಾತು ಅಳವಡಿಕೆ ವರದಿಯಿಲ್ಲ:

ಪಾಲಿಕೆ ವ್ಯಾಪ್ತಿಯ 1,200ಕ್ಕೂ ಅಧಿಕ ಬಸ್ ನಿಲ್ದಾಣ, 200ಕ್ಕೂ ಅಧಿಕ ಸ್ಕೈವಾಕ್, 440ಕ್ಕೂ ಅಧಿಕ ಪೊಲೀಸ್ ಚೌಕಿ, ಸಾರ್ವಜನಿಕ ಶೌಚಗೃಹ ನಿರ್ಮಾಣ ಹಾಗೂ ಇನ್ನಿತರೆ ಮೂಲ ಸೌಕರ್ಯ ಯೋಜನೆಗಳಿಗೆ ಹಣಕ್ಕೆ ಬದಲಾಗಿ ಜಾಹೀರಾತು ಪ್ರದರ್ಶನ ಹಕ್ಕು ನೀಡಲಾಗುತ್ತಿದೆ. ಯೋಜನೆಯ ವೆಚ್ಚ ಮತ್ತು ಪಡೆಯುವ ಆದಾಯ ಸಮತೋಲಿತ ಆಗಿರಬೇಕು. ಆದರೆ,ಜಾಹೀರಾತು ಪ್ರದರ್ಶನ ಸಂಸ್ಥೆಗಳು ಟೆಂಡರ್ ನಿಯಮ ಉಲ್ಲಂಘಿಸಿ ಮನಬಂದಂತೆ ಜಾಹೀರಾತು ಫಲಕ ಅಳವಡಿಸುತ್ತಿವೆ. ಹೀಗಾಗಿ, ಬಿಬಿಎಂಪಿಯೊಂದಿಗೆ ಜಾಹೀರಾತು ಸಂಸ್ಥೆಗಳು ಮಾಡಿಕೊಂಡ ಒಡಂಬಡಿಕೆ ಬಗ್ಗೆ ಪರಿಶೀಲನಾ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಸೆ.18ರಿಂದ ಕೇವಲ 7 ದಿನ ಗಡುವು ನೀಡಿದೆ. ಆದರೆ, ಈವರೆಗೂ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ವರದಿ/ ತನಿಖೆ/ ಸಮೀಕ್ಷೆ ಗಡುವು ಗುರಿ

ಸಾವು ವಿಶ್ಲೇಷಣಾ ವರದಿ ಜೂ.15

ಶಿಥಿಲ ಕಟ್ಟಡಗಳ ಸಮೀಕ್ಷೆ ಅ.14

ಸ್ವೆಟರ್ ಸರಬರಾಜು ಟಿವಿಸಿಸಿ ತನಿಖೆ ಅ.1

ಪಿಪಿಪಿ ಜಾಹೀರಾತು ಅಳವಡಿಕೆ ವರದಿ ಸೆ.25

ಬಿಬಿಎಂಪಿ ವ್ಯಾಪ್ತಿಯಲ್ಲಿ ಭ್ರಷ್ಟರನ್ನು ಶಿಕ್ಷಿಸುವ ಯಾವುದೇ ತನಿಖಾ ವರದಿಗಳು, ವಿಶ್ಲೇಷಣೆಗಳು ಸಾರ್ವಜನಿಕರಿಗೆ ಬರಹಿರಂಗ ಆಗುವುದಿಲ್ಲ. ಪೊಲೀಸ್ ಇಲಾಖೆ, ಬಿಎಂಟಿಎಫ್​ಗೆ ದೂರು ನೀಡಿದರೂ, ಭ್ರಷ್ಟರೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕುತ್ತಾರೆ. ಪಾಲಿಕೆ ಮುಖ್ಯ ಆಯುಕ್ತರು ಎಲ್ಲ ತನಿಖಾ ವರದಿ ಮತ್ತು ವಿಶ್ಲೇಷಣಾ ವರದಿಗಳನ್ನು ಬಿಬಿಎಂಪಿ ವೆಬ್​ಸೈಟ್​ಗೆ ಹಾಕಿ ಪಾರದರ್ಶಕತೆ ಕಾಪಾಡಬೇಕು.

| | ಎಸ್. ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಧ್ಯಕ್ಷ