ನ್ಯೂಸ್

ಹಣ ಬಿಡುಗಡೆಗೆ ಬಿಬಿಎಂಪಿ ವಿಳಂಬ: ಕುಮಾರಸ್ವಾಮಿ ಮೊರೆ ಹೋದ ಗುತ್ತಿಗೆದಾರರು!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ 26 ತಿಂಗಳ ಬಾಕಿ ಬಿಲ್ ಪಾವತಿ ಮಾಡದಿರುವ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಗುತ್ತಿಗೆದಾರರು, ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡ, ಈಗ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಗುತ್ತಿಗೆದಾರರ ಅಹವಾಲು ಆಲಿಸಿದ ಕುಮಾರಸ್ವಾಮಿ, ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ನಿಮ್ಮ ಬಾಕಿ ಹಣ ತಡೆ ಹಿಡಿಯುವುದು ಸರಿಯಲ್ಲ. ಹಣ ಬಿಡುಗಡೆ ಮಾಡದಿದ್ದರೆ ನಿಮ್ಮ ಜತೆ ನಾನು ಧರಣಿ ಕೂರುತ್ತೇನೆ. ನೀವು ಯಾರೂ ಅಂಜಬೇಕಿಲ್ಲ ಎಂದು ಭರವಸೆ ನೀಡಿದರು.

ಈಗಾಗಲೇ ಹಲವು ಗುತ್ತಿಗೆದಾರರು ದಯಾಮರಣ ಕೋರಿದ್ದಾರೆ. ಮಂಗಳೂರಿನಲ್ಲಿ ಒಬ್ಬ ಗುತ್ತಿಗೆದಾರ, ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಾಲಿಕೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಗುತ್ತಿಗೆದಾರರು ಕುಮಾರಸ್ವಾಮಿ ಮುಂದೆ ಹೇಳಿಕೊಂಡರು.

ಗುತ್ತಿಗೆದಾರರು ನೀಡಿದ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ ದುಡಕಬೇಡಿ, ನಿಮ್ಮ ಪರ ನಾನು ನಿಲ್ಲುತ್ತೇನೆ ಎಂದು ಕುಮಾರಸ್ವಾಮಿ ಧೈರ್ಯ ತುಂಬಿದರು.