ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿಗಳ ಹೆಸರಿನಲ್ಲಿ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ (ಎಇಇ) ಅಪರಿಚಿತ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದಾನೆ. ಈ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಶ್ರೀನಿವಾಸ ದೊಡ್ಡಮನಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಅ. ೩ರಂದು ರಾಜರಾಜೇಶ್ವರಿ ನಗರದ ಸರೋವರ ವಲಯದ ಪಾಲಿಕೆ ಎಇಇ ವೆಂಕಟೇಶ್ ಅವರ ಮೊಬೈಲ್‌ಗೆ ಕರೆಯೊಂದು ಬಂದಿದ್ದು, ಆ ಕರೆಯನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಮಿಸ್ಡ್ ಕಾಲ್ ನಂಬರ್ ಅನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ಉಪಲೋಕಾಯುಕ್ತರಾದ ಣೀಂದ್ರ ಅವರ ಹೆಸರು ತೋರಿಸಿದೆ. ಜತೆಗೆ ಪ್ರೊಫೈಲ್‌ನಲ್ಲಿ ಲೋಕಾಯುಕ್ತರ ಫೋಟೋ ಇರುವುದು ಕಂಡುಬಂದಿದೆ. ನಂತರವೂ ಒಂದೆರೆಡು ಬಾರಿ ಅದೇ ನಂಬರ್‌ನಿಂದ ಕರೆಗಳು ಬಂದಾಗ ಅನುಮಾನಗೊಂಡ ವೆಂಕಟೇಶ್ ಅವರು, ಲೋಕಾಯುಕ್ತ ಕಚೇರಿಗೆ ಬಂದು ಈ ಬಗ್ಗೆ ಮಾಹಿತಿ ನೀಡಿ ವಿಚಾರಿಸಿದ್ದಾಗ ಅದು ನಕಲಿ ನಂಬರ್ ಎಂಬುದು ಖಚಿತವಾಗಿದೆ. ಕೂಡಲೇ ವೆಂಕಟೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ಲಿಖಿತವಾಗಿ ದೂರನ್ನು ನೀಡಿದ್ದಾರೆ.
ಲೋಕಾಯುಕ್ತರ ಹೆಸರಿನಲ್ಲಿ ಕರೆ ಮಾಡಿ, ಲೋಕಾಯುಕ್ತ ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದ ಹಾಗೂ ತಮ್ಮ ಕರ್ತವ್ಯ ನಿರ್ವಹಿಸುವಾಗ ಲೋಕಾಯುಕ್ತರ ಹೆಸರಿನಲ್ಲಿ ಕಿರುಕುಳ ನೀಡಿದ್ದ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಶ್ರೀನಿವಾಸ ದೊಡ್ಡಮನಿ ಅವರು ವಿಧಾನಸೌಧದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.