ಬೆಂಗಳೂರು: ಎರಡನೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಯಲ್ಲಿ ಇಡೀ ಮನೆಯವರಿಗೆ ಎಂದಿನಂತೆ ತಮ್ಮ ಶೈಲಿಯಲ್ಲೇ ಖಡಕ್ ಕ್ಲಾಸ್ ತೆಗೆದುಕೊಂಡ ನಟ, ನಿರೂಪಕ ಕಿಚ್ಚ ಸುದೀಪ್, ಪ್ರತಿಯೊಬ್ಬ ಸ್ಪರ್ಧಿಗಳಿಗೂ (BBKS11) ಅವರವರ ತಪ್ಪುಗಳನ್ನು ಎತ್ತಿಹಿಡಿದು, ತಿದ್ದಿಕೊಳ್ಳಬೇಕಾದ ವಿಷಯಗಳನ್ನು ಸೂಕ್ಷ್ಮವಾಗಿ ಅರ್ಥೈಸಿದರು. ಇದು ಕೆಲವರಿಗೆ ಒಪ್ಪಿಗೆ ಆದರೆ, ಇನ್ನೂ ಕೆಲವರಿಗೆ ತೀವ್ರ ಅಸಮಾಧಾನ ತಂದಿದೆ. ಜಗಳಕ್ಕೆ ಕಾರಣವಾಗುವ ಮಾತಿನ ಮೇಲೆ ಹಿಡಿತವಿರಲಿ ಎಂದು ಸುದೀಪ್ ಅವರು ಹೇಳಿ ಹೋದ ಬಳಿಕವು ಮತ್ತೆ ಮನೆಯಲ್ಲಿ ಜಟಾಪಟಿಗಳು ಭುಗಿಲೆದ್ದಿವೆ.
ಕಳೆದ ಬಾರಿಯೂ ನಾಮಿನೇಷನ್ ವಿಚಾರಕ್ಕೆ ಬಿಗ್ ಮಂದಿ ಮಧ್ಯೆ ಭಾರೀ ಮನಸ್ತಾಪ ಮೂಡಿತ್ತು. ಅದಾದ ಬಳಿಕ ಪರಸ್ಪರ ವಾಗ್ದಾಳಿ ನಡೆದು, ಗಲಾಟೆಗೂ ತಿರುಗಿದ ನಿದರ್ಶನವೂ ಇದೆ. ಹೀಗಿರುವಾಗ ಮತ್ತೆ ಮನೆಯಲ್ಲಿ ಅದೇ ನಾಮಿನೇಷನ್ ವಿಚಾರಕ್ಕೆ ಏಕವಚನದ ವಾಗ್ದಾಳಿ ನಡೆದಿದೆ. ತ್ರಿವಿಕ್ರಮ್ ಮತ್ತು ಐಶ್ವರ್ಯ ಶಿಂಧೋಗಿ ಸೇರಿಕೊಂಡು ಬಿಗ್ ಬಾಸ್ ಕೊಟ್ಟ ಅಧಿಕಾರದ ಮೇರೆಗೆ ಒಮ್ಮತದಿಂದ ಮಾನಸ ಮತ್ತು ಮಂಜು ಆವರನ್ನು ನೇರವಾಗಿ ಈ ವಾರ ನಾಮಿನೇಟ್ ಮಾಡಿದ್ದಾರೆ.
ತನ್ನನ್ನು ನಾಮಿನೇಟ್ ಮಾಡಲು ಐಶ್ವರ್ಯ ಕೊಟ್ಟ ಕಾರಣದಿಂದ ಕೆರಳಿದ ಮಾನಸ, ಏಕಾಏಕಿ ನೀನ್ಯಾರು ನನ್ನ ಗುಣವನ್ನು ನಿರ್ಧರಿಸಲು? ನೀನ್ಯಾವಳು ಎಂದೆಲ್ಲಾ ಏಕವಚನದಲ್ಲಿ ಸಂಬೋಧಿಸಿ ಮಾತನಾಡಿದ್ದಾರೆ. ಮತ್ತೊಂದೆಡೆ ಮಂಜು ಅವರನ್ನು ನಾಮಿನೇಟ್ ಮಾಡಿದ ತ್ರಿವಿಕ್ರಮ್ ವಿರುದ್ಧವು ಮಾತಿನ ಸಮರ ನಡೆದಿದ್ದು, ಮಂಜು ಮತ್ತು ತ್ರಿವಿಕ್ರಮ್ ನಡುವೆ ವಾಕ್ಸಮರ ಜೋರಾಗಿದೆ. ಈ ಪ್ರೋಮೋ ಇದೀಗ ಹೊರಬಿದ್ದಿದ್ದು, ಅಸಲಿಗೆ ಅಲ್ಲಿ ಆಗಿದ್ದೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.