ನ್ಯೂಸ್

BBKS11: ವಾರದ 3ನೇ ಪಂಚಾಯತಿಯಲ್ಲಿ ಈ ಮೂವರಿಗೆ ಕಿಚ್ಚನ ಕ್ಲಾಸ್​ ಪಕ್ಕಾ!

ಬೆಂಗಳೂರು: ಕಳೆದ ವಾರ ಕನ್ನಡ ಬಿಗ್​ಬಾಸ್ ಸೀಸನ್​ 11ರಲ್ಲಿ (BBKS11) ಮಹಿಳೆಯರನ್ನು ನಿಂದಿಸಿದ ಲಾಯರ್​ ಜಗದೀಶ್​ ಮತ್ತು ದೈಹಿಕ ಹಲ್ಲೆ ನಡೆಸಿದ ಕಾರಣ ರಂಜೀತ್​ರನ್ನು ಮನೆಯಿಂದ ನೇರವಾಗಿ ಎಲಿಮಿನೇಟ್ ಮಾಡಿ, ಹೊರಹಾಕಲಾಯಿತು. ಇವರಿಬ್ಬರಿಗೆ ಎರಡನೇ ಕಿಚ್ಚನ ಪಂಚಾಯತಿಯಲ್ಲಿ ಏನು ಹೇಳಬೇಕಿತ್ತೋ ಅದನ್ನು ತಮ್ಮದೇ ಖಡಕ್ ಶೈಲಿಯಲ್ಲಿ, ಮನಕ್ಕೆ ಮುಟ್ಟುವಂತೆ ಅರ್ಥೈಸಿದ ನಟ, ನಿರೂಪಕ ಸುದೀಪ್​, ಚೈತ್ರಾ ಕುಂದಾಪುರ, ಮಾನಸಾ, ಉಗ್ರಂ ಮಂಜು ಮತ್ತು ಹಂಸಾ ಸೇರಿದಂತೆ ಬಹುತೇಕರಿಗೆ ಆಟದ ಬಗ್ಗೆ ಅರಿವು ಮೂಡಿಸುವುದರ ಜತೆ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿಸುವ ಮುಖೇನ ಸರಿಯಾಗಿ ಚಳಿಬಿಡಿಸಿದ್ದರು. ಇದೀಗ ಮೂರನೇ ವಾರಕ್ಕೆ ಕಾಲಿಟ್ಟರು ಸಹ ಸ್ಪರ್ಧಿಗಳ ನಡುವಿನ ವಾಕ್ಸಮರ, ಏಕವಚನ ದಾಳಿ, ಗುದ್ದಾಟ ಕಡಿಮೆ ಆದಂತೆ ಕಂಡುಬಂದಿಲ್ಲ (Kichcha Sudeep).

ಜಗದೀಶ್​ ಇದ್ದ ಕಾರಣ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತು ಎಂದು ಭಾವಿಸಿದ್ದ ವೀಕ್ಷಕರು, ಈ ವಾರದಲ್ಲಿ ಸ್ಪರ್ಧಿಗಳು ಜಗದೀಶ್​ ಅವರ ಅನುಪಸ್ಥಿತಿಯಲ್ಲಿಯೂ ಮಾಡಿದ ಜಟಾಪಟಿ, ಹೊಡೆದಾಟವನ್ನು ಗಮನಿಸಿದ್ದಾರೆ. ಕಳೆದ ವಾರ ಮಾತೃವಿಯೋಗ ಕಂಡ ನಟ ಸುದೀಪ್​ ಅವರು, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯನ್ನು ಮಾತ್ರ ನಡೆಸಿಕೊಡಲು ಸಾಧ್ಯವಾಯಿತು. ತಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಸಹ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಡದೆ, ಬಹುತೇಕ ಸಮಯ ವೇದಿಕೆಯ ಮೇಲೆ ನಿಂತು, ಸ್ಪರ್ಧಿಗಳ ತಪ್ಪುಗಳನ್ನು ತಿದ್ದಿ-ಬುದ್ದಿ ಹೇಳಿದವರು ಕಿಚ್ಚ. ಇದೀಗ ಮೂರನೇ ಪಂಚಾಯತಿ ನಡೆಸಲು ಆಗಮಿಸಲಿರುವ ಸುದೀಪ್ ಈ ವಾರ ಮನೆಯ ಯಾರೆಲ್ಲಾ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಆದರೆ, ಸುದೀಪ್​ ಅವರ ಆಗಮನ ಈ ವಾರ ಇರಲಿದೆಯೇ ಎಂಬುದು ಸದ್ಯ ಅನುಮಾನವಾಗಿಯೇ ಉಳಿದುಕೊಂಡಿದೆ.

ಈ ಮಧ್ಯೆ ಸುದೀಪ್​ ಅವರು ವಾರದ ಮೂರನೇ ಕಿಚ್ಚನ ಪಂಚಾಯತಿಗೆ ಆಗಮಿಸಿದ್ದೇ ಆದರೆ, ಮನೆಯಲ್ಲಿ ಕುಸ್ತಿ ಅಖಾಡದಲ್ಲಿ ಹೊಡೆದಾಡುವಂತೆ ಬಡಿದಾಡಿಕೊಂಡ ತ್ರಿವಿಕ್ರಮ್ ಹಾಗೂ ಮಂಜು, ಮಾತಿನ ಭರದಲ್ಲಿ ಏಕವಚನ ವಾಗ್ದಾಳಿ ನಡೆಸಿದ ಮಾನಸಾ ಮತ್ತು ಏರುಧ್ವನಿಯಲ್ಲಿ ವಾಗ್ದಾಳಿ ನಡೆಸಿದ ಚೈತ್ರಾ ಕುಂದಾಪುರ ಅವರಿಗೆ ಇಂದು ಸುದೀಪ್ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಎಂದೇ ನಿರೀಕ್ಷಿಸಲಾಗಿದೆ. ಸದ್ಯ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಇಂದಿನ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯನ್ನು ವೀಕ್ಷಿಸಬೇಕಿದೆ.