ನ್ಯೂಸ್

BBKS10: ಫಿನಾಲೆಯ ಗೆಲುವಿನ ಓಟದಲ್ಲಿ ಈ ಇಬ್ಬರು ಪಕ್ಕಾ! ನಿಮ್ಮ ಪ್ರಕಾರ ಯಾರಿರಬಹುದು?

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಹೊಸ ವರ್ಷದ ಸಂಭ್ರವನ್ನು ಮುಗಿಸಿದ ಸ್ಪರ್ಧಿಗಳು ಯಥಾ ಪ್ರಕಾರ ಟಾಸ್ಕ್​ನತ್ತ ಮರಳಿದ್ದಾರೆ. ಇದೀಗ ಫಿನಾಲೆ ಹಂತಕ್ಕೆ ಸಮೀಪದಲ್ಲಿರುವ ಸದಸ್ಯರು ಬಿಗ್ ಬಾಸ್​ 10ರ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಭರದಲ್ಲಿ ಟಾಸ್ಕ್​ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಪ್ರತಿ ಸೀಸನ್​ನಲ್ಲಿಯೂ 50 ದಿನ ಕಳೆದ ಬಳಿಕ ವೀಕ್ಷಕರು ಐವರು ಫೈನಲಿಸ್ಟ್​ ಜತೆಗೆ ಈ ಇಬ್ಬರು ಪಕ್ಕಾ ಸುದೀಪ್​ ಅವರ ಎಡಗೈ ಮತ್ತು ಬಲಗೈ ಹಿಡಿಯುವುದು ಖಚಿತ ಎಂದು ಊಹಿಸುತ್ತಾರೆ. ಈ ಹಿಂದೆಯೂ ಅದೇ ರೀತಿ ಊಹಿಸಿದ್ದಾರೆ. ಅದರಂತೆಯೇ ಫೈನಲ್ ಹಣಾಹಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಟ್ರೋಫಿ ಗೆದ್ದ ಸ್ಪರ್ಧಿಗಳ ಉದಾಹರಣೆ ಕೂಡ ಇದೆ. ಆದ್ರೆ, ಇದೇ ಮೊದಲ ಬಾರಿಗೆ ಯಾರು ಸೀಸನ್ 10ರ ಪಟ್ಟವನ್ನು ಗೆಲ್ತಾರೆ ಎಂಬುದನ್ನು ನೆಟ್ಟಿಗರಿಗೆ ಊಹಿಸಲು ಅಸಾಧ್ಯವಾಗಿರುವುದು ಸದ್ಯ ಭಾರೀ ಆಶ್ವರ್ಯಕ್ಕೆ ಕಾರಣವಾಗಿದೆ.

ಕಳೆದ ಒಂದೆರೆಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದ ಸ್ಪರ್ಧಿಗಳು ತಿಳಿಸಿದ ಟಾಪ್ ಫೈನಲಿಸ್ಟ್​ ಹೆಸರಿನ ಆಧಾರದ ಮೇರೆಗೆ ಕಡೆಯ ಐದು ಸ್ಪರ್ಧಿಗಳು ಯಾರಿರಬಹುದು ಎಂಬುದನ್ನು ಈಗಾಗಲೇ ನೆಟ್ಟಿಗರು ಊಹಿಸಿದ್ದಾರೆ. ಈ ಬಾರಿ ಮಹಿಳೆಯೊಬ್ಬರು ಸೀಸನ್​ 10ರ ಪಟ್ಟವನ್ನು ಪಡೆಯುವ ಮೂಲಕ ಶ್ರುತಿ ನಂತರ ಎರಡನೇ ಮಹಿಳಾ ವಿಜೇತೆಯಾಗಿ ಹೊರಹೊಮ್ಮಬೇಕು ಎಂಬ ಆಸೆಯನ್ನು ಇತರೆ ಸ್ಪರ್ಧಿಗಳು ವ್ಯಕ್ತಪಡಿಸಿದ್ದಾರೆ.

ಸದ್ಯ ಈ ವಿಚಾರ ಮನೆಯೊಳಗೆ ಕೂಡ ಹಲವು ಬಾರಿ ಮುನ್ನೆಲೆಗೆ ಬಂದಿದ್ದು, ಇತ್ತೀಚೆಗೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಗೀತಾ ಮತ್ತು ವಿನಯ್ ನಡುವೆ ಮಾತಿನ ಜಟಾಪಟಿ ನಡೆಯಿತು. ಸದ್ಯ ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಪ್ರತಾಪ್, ಸಂಗೀತಾ, ತನಿಷಾ ಮತ್ತು ನಮ್ರತಾ ಫೈನಲ್​ ತಲುಪಲು ಎದುರು ನೋಡುತ್ತಿದ್ದು, ಈ 8 ಸ್ಪರ್ಧಿಗಳ ಪೈಕಿ ಒಬ್ಬರು ಮಹಿಳೆಯಂತು ಪಕ್ಕಾ ಫೈನಲ್​ನಲ್ಲಿ ಇರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ.

ಫೈನಲ್​ನಲ್ಲಿ ಪ್ರತಾಪ್​ ಇರುತ್ತಾರೆ ಎಂದು ಒಂದಷ್ಟು ಜನರು ಹೇಳಿದರೆ, ಮತ್ತೊಂದಿಷ್ಟು ಜನರು ಕಾರ್ತಿಕ್ ವಿಜೇತರಾಗುತ್ತಾರೆ ಎಂದು ಊಹಿಸಿದ್ದಾರೆ. ಆದ್ರೆ, ಫಿನಾಲೆಯ ಅಂತಿಮ ಹಂತದಲ್ಲಿ ಟ್ರೋಫಿಗಾಗಿ ಸೆಣಸಾಡುವ ಇಬ್ಬರಲ್ಲಿ ಸುದೀಪ್​ ಅವರ ಒಂದು ಕೈ ಕಾರ್ತಿಕ್​ ಅಥವಾ ಪ್ರತಾಪ್,​ ಮತ್ತೊಂದು ಕೈನಲ್ಲಿ ತನಿಷಾ ಅಥವಾ ಸಂಗೀತಾ ಅವರಲ್ಲಿ ಯಾರದ್ದಾದರೂ ಇರಬಹುದು ಎಂಬ ಲೆಕ್ಕಾಚಾರಗಳು ಹರಿದಾಡುತ್ತಿವೆ. ಒಟ್ಟಾರೆ ಈ ಎಲ್ಲಾ ಪ್ರಶ್ನೆಗಳಿಗೂ ಬಿಗ್ ಬಾಸ್​ ಗ್ರ್ಯಾಂಡ್​ ಫಿನಾಲೆಯಲ್ಲಿ ಅಧಿಕೃತ ಉತ್ತರ ಸಿಗಲಿದೆ.