ನ್ಯೂಸ್

BBKS10: ಕಡೆಗೂ ಪ್ರತಾಪ್ ಬಹುದಿನದ ಕೋರಿಕೆ ಈಡೇರಿತು​!

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಇದೀಗ 12ನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಮನೆಯೊಳಗಿನ ಸ್ಪರ್ಧಿಗಳು ತೀರ ಭಾವುಕರಾಗಿದ್ದಾರೆ. ಕಾರಣ ಯಾವುದೇ ಟಾಸ್ಕ್​ ವಿಷಯವಾಗಿ ಅಲ್ಲ! ಬದಲಿಗೆ ಮನೆಗೆ ಆಗಮಿಸುತ್ತಿರುವ ತಮ್ಮ ಕುಟುಂಬದ ಸದಸ್ಯರನ್ನು ನೋಡಿ ಕಣ್ಣೀರಿಡುತ್ತಿದ್ದಾರೆ. ಇದೀಗ ಈ ಸಾಲಿಗೆ ಸದಾ ಮೌನದಿಂದಲೇ ಇರುವ ಡ್ರೋನ್ ಪ್ರತಾಪ್​ ತನ್ನ ಪೋಷಕರ ಆಗಮನ ತಿಳಿದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸುದೀಪ್ ಇಲ್ಲದೆ ವಾರಾಂತ್ಯ ಕಳೆದು ಹೊಸ ವಾರ ಶುರುವಾಗಿದೆ. ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಅಲ್ಲದೆ ಸೌಹಾರ್ದಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆಮಂದಿ ಕಣಕ್ಕಿಳಿದಿದ್ದಾರೆ. ಬಿಗ್ ಬಾಸ್ ಮನೆಯ ಸದಸ್ಯರು ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಸದಸ್ಯರು ತಮ್ಮ ಕುಟುಂಬದವರು ಮನೆಯೊಳಗೆ ಬರುವ ಸೂಚನೆಯಿಂದ ಮನದೊಳಗೆ ಮೌನದಿಂದ ಕಾಯತೊಡಗಿದ್ದಾರೆ. ಮೊದಲು ಮನೆಯೊಳಗೆ ನಮ್ರತಾ ತಾಯಿ ಬಂದರೆ, ಅವರ ಬೆನ್ನಲ್ಲೇ ವರ್ತೂರು ಸಂತೋಷ್ ಅವರ ಅಮ್ಮ ಆಗಮಿಸಿದರು.

ಪ್ರೀತಿ, ಮಮತೆಯಿಂದ ಕೂಡಿದ ಭಾವನೆಗಳ ಮಧ್ಯೆ ಒಂದಷ್ಟು ಬುದ್ದಿ ಮಾತುಗಳು ಕೂಡ ಕೇಳಿಬಂತು. ತದನಂತರದಲ್ಲಿ ಮೈಕಲ್ ಹಾಗೂ ಕಾರ್ತಿಕ್ ಅವರ ಪೋಷಕರು ಆಗಮಿಸಿ, ಎಲ್ಲರಿಗೂ ಫೈನಲ್​ಗೆ ಶುಭಕೋರಿದರು. ಸದ್ಯ ಎಲ್ಲಾ ಸ್ಪರ್ಧಿಗಳ ಕುಟುಂಬದವರ ಆಗಮನ ಕಂಡು ಮೌನದಿಂದಲೇ ಕುಳಿತ್ತಿದ್ದ ಪ್ರತಾಪ್​ಗೆ ಈಗ ತನ್ನ ತಂದೆ-ತಾಯಿ ಬರಲಿದ್ದಾರೆ ಎಂಬ ಸೂಚನೆ ಸಿಕ್ಕಿದ್ದು, ಅವರನ್ನು ನೋಡುವ ತವಕ ಹೆಚ್ಚಿದೆ.

ಬಿಗ್ ಬಾಸ್ ಮುಖ್ಯದ್ವಾರದಿಂದ ಪ್ರತಾಪ್ ಪೋಷಕರು ಆಗಮಿಸಿದ್ದು, ಗಾಜಿನ ಡೋರ್​ ಲಾಕ್​ ಆಗಿದೆ. ಹೊರಗಡೆಯಿಂದ ತಂದೆ-ತಾಯಿ ನಿಂತು ಕಂಬನಿ ಮಿಡಿದರೆ, ಅತ್ತ ಡೋರ್​ ತೆಗೆಯಿರಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.