ನ್ಯೂಸ್

BBKS10; ಕ್ಯಾಪ್ಟನ್‌ ಸ್ನೇಹಿತ್​ಗೆ ಕಠಿಣ ಶಿಕ್ಷೆ?

ಬೆಂಗಳೂರು: ಎರಡನೇ ವಾರಕ್ಕೆ ಕಾಲಿಟ್ಟಿರುವ ಬಿಗ್​ಬಾಸ್​ ಸ್ಪರ್ಧಿಗಳು ಮನೆಯಲ್ಲಿ ನಡೆಯುತ್ತಿರುವ ಟಾಸ್ಕ್​ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರೂ ಕೂಡ ಇತರೆ ಸ್ಪರ್ಧಿಗಳ ನಡುವಿನ ಮನಸ್ತಾಪ, ಜಗಳದಲ್ಲಿಯೇ ಹೆಚ್ಚಾಗಿ ಸಕ್ರಿಯರಾಗಿದ್ದಾರೆ. ಈ ಮಧ್ಯೆ ಮನೆಯ ಕ್ಯಾಪ್ಟನ್ ಆಗಿದ್ದ ಸ್ನೇಹಿತ್​ ಈಗ ಸದಸ್ಯರಿಂದ ತಮ್ಮ ನಾಯಕನ ಪಾತ್ರಕ್ಕಾಗಿ ಅಂಕಗಳನ್ನು ಪಡೆದುಕೊಂಡಿದ್ದಾರೆ.

ವಾರವಿಡೀ ಕ್ಯಾಪ್ಟನ್​ ಆಗಿ ನಿರ್ವಹಿಸಿದ ಸ್ನೇಹಿತ್​ಗೆ ಮನೆಯ ಸದಸ್ಯರು ಅಂಕಗಳನ್ನು ಕೊಡುವ ಮೂಲಕ ಅವರ ಜವಾಬ್ದಾರಿ ಹೇಗಿತ್ತು ಎಂಬುದನ್ನು ತಿಳಿಸಬೇಕು ಎಂದು ಬಿಗ್ ಬಾಸ್ ಹೇಳಿದರು. ಬಿಗ್‌ಬಾಸ್‌ ಕನ್ನಡದ ಹತ್ತನೇ ಸೀಸನ್‌ನ ಮೊದಲನೇ ನಾಯಕನಾಗಿ ಸ್ನೇಹಿತ್ ಆಯ್ಕೆಯಾಗಿದ್ದರು. ನಾಯಕನಾದ ಮೇಲೆ ಅವರ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು.

ತದನಂತರದಲ್ಲಿ ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದ್ರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್‌ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದ್ದವು. ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್‌ ಕ್ಯಾಪ್ಟನ್ಸಿಗೆ ಅಂಕಗಳನ್ನು ಕೊಟ್ಟಿದ್ದು, ತಮ್ಮದೇ ಕಾರಣಗಳನ್ನು ನೀಡಿ ಅವರನ್ನು ಬಿಗ್‌ಬಾಸ್‌ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ.

ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಮೇಲೆ ಬಂದು ನಡುಗುತ್ತ ನಿಂತಿದ್ದಾರೆ. ಮೈಯಲ್ಲಿ ನಡುಕವಿದ್ದರೂ ಕಣ್ಣೊಳಗೆ ಕೋಪ ತುಂಬಿರುವುದು ಕಾಣಿಸಿದೆ. ಸ್ನೇಹಿತ್‌ ಕ್ಯಾಪ್ಟನ್ಸಿ ಬಗ್ಗೆ ಯಾವ್ಯಾವ ಸ್ಪರ್ಧಿಗಳು ಎಷ್ಟೆಷ್ಟು ಮಾರ್ಕ್ಸ್‌ ಕೊಟ್ಟಿದ್ದಾರೆ, ಒಟ್ಟಾರೆಯಾಗಿ ಕ್ಯಾಪ್ಟನ್‌ ಆಗಿ ಸ್ನೆಹಿತ್ ಗೆದ್ದಿದ್ದಾರಾ, ಸೋತಿದ್ದಾರಾ? ಎಂಬುದನ್ನು 24 ಗಂಟೆಗಳ ಜಿಯೋ ಸಿನಿಮಾದ ಲೈವ್​ ಸ್ಟ್ರೀಮ್​ನಲ್ಲಿ ನೋಡಬಹುದು.