ನ್ಯೂಸ್

BBK11: 'ಬಾಸ್'​ ಪದದಲ್ಲಿ ವ್ಯಂಗ್ಯವಿದೆ! ಯಾರನ್ನು ಯಾರು ಮನೆಯಿಂದ ಕಳಿಸ್ತಾರೆ ಅನ್ನೋದೇ ಸವಾಲು

ಬೆಂಗಳೂರು: ಕಳೆದ ವಾರ ಬಿಗ್​ ಬಾಸ್​ ಸೀಸನ್​ 11ರ (BBK11) ಎಂಟನೇ ವಾರದಲ್ಲಿ ಬಿಗ್ ಮನೆಯಿಂದ ಕ್ಯಾಡ್​ಬರೀಸ್,​ ನಟ ಧರ್ಮ ಕೀರ್ತಿರಾಜ್​ ಎಲಿಮಿನೇಟ್ ಆಗಿ ಹೊರಬಂದ ಬೆನ್ನಲ್ಲೇ ಬಿಗ್ ಮನೆಯಲ್ಲಿ ನಾಮಿನೇಷನ್ ಬಿಸಿ ತಟ್ಟಿದೆ. ಈ ವಾರ ಯಾರನ್ನು ಮನೆಯಿಂದ ಹೊರಗೆ ಕಳಿಸಲು ನೀವು ಇಚ್ಛಿಸುತ್ತೀರಿ? ಎಂಬ ಬಿಗ್ ಬಾಸ್​ ಪ್ರಶ್ನೆಗೆ ಇದೀಗ ಸ್ಪರ್ಧಿಗಳಿಂದ ಕಿಡಿ ಹಚ್ಚುವ ಉತ್ತರಗಳೇ ಬಂದಿವೆ.

9ನೇ ವಾರಕ್ಕೆ ಮನೆಯ ಕ್ಯಾಪ್ಟನ್ ಆಗಿ ಅಧಿಕಾರ ಪಡೆದಿರುವ ಉಗ್ರಂ ಮಂಜು, ಬಿಗ್ ಬಾಸ್​ನಿಂದ ಉತ್ತಮ ಸವಲತ್ತನ್ನೇ ಸ್ವೀಕರಿಸಿದ್ದಾರೆ. ಈ ವಾರದಲ್ಲಿ ಮನೆಯ ರಾಜನಾಗಿ ಸಿಂಹಾಸನದ ಮೇಲೆ ತನ್ನ ದರ್ಬಾರ್​ ನಡೆಸುತ್ತಿರುವ ಮಂಜು, ಸ್ಪರ್ಧಿಗಳು ತನ್ನ ಮಾತನ್ನು ಮೀರದಂತೆ ಇರಲು ಆದೇಶಿಸಿದ್ದಾರೆ. ಇದೊಂದು ರೀತಿ ಮನೆಯವರ ಸಿಡಿಮಿಡಿಗೆ ಕಾರಣವಾಗಿದ್ದರೂ ನೋಡುಗರಿಗೆ ಖುಷಿ ನೀಡಿದೆ. ಈ ಮಧ್ಯೆ ನಡೆದ ನಾಮಿನೇಷನ್​ ಪ್ರಕ್ರಿಯೆಯಲ್ಲಿ ಚೈತ್ರಾ ಮತ್ತು ರಜತ್​ ನಡುವೆ ದೊಡ್ಡ ಮಾತಿನ ಸಮರವೇ ನಡೆದುಹೋಗಿದೆ.

ನನಗೆ ರಜತ್​ ಪ್ರತಿಬಾರಿ 'ಬಾಸ್​ ಎಂದು ಉಲ್ಲೇಖಿಸಿ ಕರೆಯುವುದು ಇಷ್ಟವಿಲ್ಲ. ಅದರಲ್ಲಿ ವ್ಯಂಗ್ಯ ಅಡಗಿದೆ ಎಂದು ಕಾರಣ ಕೊಟ್ಟಿದ್ದಾರೆ. ಈ ಮಾತಿಗೆ ಸಿಟ್ಟಿಗೆದ್ದ ರಜತ್, ನಗುನಗುತ್ತಲೇ ಬಾಸ್​ ಇದೇ ಕಾರಣಕ್ಕೆ ನೀವು ನನ್ನ ಮನೆಗೆ ಕಳಿಸಲು ಇಚ್ಛಿಸುತ್ತೀರಾ? ನಿಮ್ಮನ್ನು ಈ ಮನೆಯಿಂದ ಹೊರಗೆ ಕಳಿಸುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ. ಸದ್ಯ ಇವರಿಬ್ಬರ ಮಾತಿನ ಜಟಾಪಟಿಯ ಪ್ರೋಮೋ ಹೊರಬಿದ್ದಿದ್ದು, ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.