BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಇದೀಗ ಕೊನೆಯ ಹಂತ ತಲುಪಿದೆ. ನಿರೂಪಕನಾಗಿ ಕಿಚ್ಚ ಸುದೀಪ್ ಅವರ ಕಡೆಯ ಸೀಸನ್ ಇದಾಗಿದ್ದು, ವೇದಿಕೆಯಲ್ಲಿ 'ಮ್ಯಾಕ್ಸ್' ಮ್ಯಾಕ್ಸಿಮಮ್ ಡ್ಯಾನ್ಸ್ ಮಾಡಿದ್ದಾರೆ.
ಯಶಸ್ವಿ 15 ವಾರಗಳನ್ನು ಪೂರೈಸಿ, 16ನೇ ವಾರ ಹಾಗೂ ಕೊನೆಯ ವಾರದಲ್ಲಿ ಮನೆಯೊಳಗೆ ಉಳಿದಿರುವ ಸ್ಪರ್ಧಿಗಳ ನಡುವೆ ಈಗ ಗೆಲುವಿನ ಓಟದ ಲೆಕ್ಕಾಚಾರ ಬಿಟ್ಟರೆ ಬೇರೇನೂ ಓಡುತ್ತಿಲ್ಲ. ಸದ್ಯ ಗ್ರ್ಯಾಂಡ್ ಫಿನಾಲೆ ತಲುಪಿರುವ ಆರು ಸ್ಪರ್ಧಿಗಳ ಭವಿಷ್ಯ ಇಂದು ಮತ್ತು ನಾಳೆಯ ಸಂಚಿಕೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಸೀಸನ್ 11ರ ಪಟ್ಟಕ್ಕಾಗಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಮಂಜು, ಭವ್ಯ, ರಜತ್ ಮತ್ತು ಹನುಮಂತು ಮಧ್ಯೆ ಸಖತ್ ಪೈಪೋಟಿ ಶುರುವಾಗಿದೆ. ತಮ್ಮ ಕಡೆಯ ಬಿಗ್ ಬಾಸ್ ಸೀಸನ್ ಬಗ್ಗೆ ಕಿಚ್ಚ ಹೇಳಲಿರುವ ಭಾವುಕ ಮಾತುಗಳೇನು? ಇತರರಿಗೆ ಕೊಡುವ ಸಲಹೆಗಳೇನು ಎಂಬ ಹಲವಾರು ವಿಷಯಗಳನ್ನು ನೋಡಲು ವೀಕ್ಷಕರು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ ಆರು ಗಂಟೆಯಿಂದ ಪ್ರಾರಂಭವಾಗಲಿರುವ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಜಬರ್ದಸ್ತ್ ಆಗಿ ಕಾಣಿಸಿಕೊಂಡಿದ್ದು, ಎಂದಿನಂತೆ ಆಕರ್ಷಕ ಉಡುಗೆಯಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ಇಲ್ಲಿಯವರೆಗೂ ವೇದಿಕೆಯಲ್ಲಿ ಹೆಜ್ಜೆ ಹಾಕದ ಕಿಚ್ಚ ಸುದೀಪ್, ತಮ್ಮ ಕೊನೆಯ ಸೀಸನ್ನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿರುವುದು ಫಿನಾಲೆ ಪ್ರೋಮೋದಲ್ಲಿ ಕಾಣಬಹುದಾಗಿದೆ. ಅಸಲಿಗೆ ಇಂದಿನ ಸಂಚಿಕೆಯಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ? ಯಾವ ಮೂವರು ಭಾನುವಾರದ ಸಂಚಿಕೆಗೆ ಹೋಗುತ್ತಾರೆ ಎಂಬ ಕುತೂಹಲ ನೋಡುಗರಲ್ಲಿ ಕಾಡುತ್ತಿದೆ. ಈ ಕೌತುಕಗಳಿಗೆ ನಾಳೆ ಸಂಪೂರ್ಣವಾಗಿ ತೆರೆ ಬೀಳಲಿದೆ.