ಬೆಂಗಳೂರು: ನೇರ ಮಾತು, ಖಡಕ್ ಉತ್ತರದ ಮೂಲಕ ಜನರ ಗಮನಸೆಳೆದಿರುವ ರಕ್ಷಕ್ ಬುಲೆಟ್ ಆಗಾಗ ಟ್ರೋಲಿಗರಿಗೆ ಗುರಿಯಾಗುವುದು ಕಾಮನ್. ಇದೀಗ ಬಿಗ್ ಬಾಸ್ ಕನ್ನಡ 10 ಶೋಗೆ ಬಂದಿರುವ ಅವರು ಇಲ್ಲೂ ತಮ್ಮ ವರಸೆಯ ಮೂಲಕ ಮತ್ತೊಮ್ಮೆ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ಹೌದು, ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ರಕ್ಷಕ್ ಬುಲೆಟ್ ಮಹಿಳಾ ಸ್ಪರ್ಧಿಯೊಬ್ಬರಿಗೆ "........ಎಷ್ಟು ಮಾತನಾಡುತ್ತಾಳೆ ಎಂದು ಅವಾಚ್ಯ ಪದ ಬಳಕೆ ಮಾಡಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ ರಕ್ಷಕ್ ಯಾರಿಗೆ ಆ ರೀತಿ ಪದ ಬಳಸಿ ಮಾತನಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.
ಆದರೆ ಬಳಕೆದಾರರು ಮಾತ್ರ ಈ ವಿಡಿಯೋ ನೋಡಿ ರಕ್ಷಕ್ಗೆ ಕ್ಲಾಸ್ ತೆಗೆದುಕೊಂಡಿರುವುದಂತೂ ಹೌದು. ಬಳಕೆದಾರರಲ್ಲಿ ಕೆಲವರು ಹೀಗೆ ಕಾಮೆಂಟ್ ಮಾಡಿದ್ದಾರೆ. "...ಅಷ್ಟೇ ಬಿಡು, ಹೆಣ್ಣು ಮಕ್ಕಳಿಗೆ ಮೊದಲು ಮರ್ಯಾದೆ ಕೊಡು, ನಿನಗೂ ಅಕ್ಕ ಇದ್ದಾರೆ ಎನ್ನುವುದು ಮರೆಯಬೇಡ'' ಎಂದೆಲ್ಲಾ ನಾನಾ ಕಾಮೆಂಟ್ಗಳನ್ನು ಹಾಕಿರುವುದನ್ನು ನೀವಿಲ್ಲಿ ನೋಡಬಹುದು.
ಇಷ್ಟೆಲ್ಲಾ ಕಾಮೆಂಟ್ಗಳ ನಡುವೆಯೇ ವೀಕ್ಷಕರು ರಕ್ಷಕ್ಗೆ 'ಸೂಪರ್ ಸಂಡೇ ವಿತ್ ಸುದೀಪ' ದಲ್ಲಿ ನಿಮ್ಮನ್ನು ಸುದೀಪ್ ಸರ್ ವಿಚಾರಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಹಾಗಾಗಿ ರಕ್ಷಕ್ ಅವರು ಈ ರೀತಿ ಪದ ಪ್ರಯೋಗ ಮಾಡಿರುವುದು ಸುದೀಪ್ ಕಿವಿಗೆ ಬಿದ್ದಾಗ ಏನಾಗಬಹುದು ಎಂದು ಕಾತುರರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ʻಆರ್ ಬಾಸ್ʼ ಎಂದೇ ಖ್ಯಾತಿಯಾಗಿರುವ ರಕ್ಷಕ್, ನೀಡಿದ ಪ್ರತಿ ಸಂದರ್ಶನವೂ ಟ್ರೋಲ್ ಆಗಿದೆ. ಕುಳಿತರೂ ನಿಂತರೂ ಅದು ಟ್ರೋಲ್ ಆಗುತ್ತದೆ. ಹೀಗಿರುವಾಗ ರಕ್ಷಕ್ ಬಿಗ್ ಬಾಸ್ ಮನೆಗೆ ಬಂದಿದ್ದು ಕೆಲವರ ಕಣ್ಣು ಅವರ ಮೇಲೆಯೇ ನೆಟ್ಟಿದೆ.