ನ್ಯೂಸ್

ಬಾತ್​ರೂಮ್​ ಗೋಡೆ ಕೆಡವುವಾಗ ಕಂಡುಬಂತು ಶಾಕಿಂಗ್​ ದೃಶ್ಯ! 1 ಕೋಟಿ ಜನ ನೋಡಿದ ಅಚ್ಚರಿ ವಿಡಿಯೋ ಇದು... Bathroom Wall

Bathroom Wall : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋ ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು, ಕಣ್ಣು ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಇದೀಗ ತೀವ್ರ ಚರ್ಚೆ ಹುಟ್ಟುಹಾಕಿದೆ.

ಮನೆಯ ನವೀಕರಣಕ್ಕಾಗಿ ಬಾತ್​ರೂಮ್​ ಗೋಡೆಯನ್ನು ಕೆಡುವುತ್ತಿದ್ದಾಗ ಕಂಡುಬಂದ ದೃಶ್ಯವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ಕಂಡಿದ್ದೇನೆಂದರೆ, ನಾಣ್ಯಗಳು

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್​ರೂಮ್​ ಗೋಡೆಯನ್ನು ಸುತ್ತಿಗೆಯಿಂದ ಒಡೆಯುತ್ತಾ ಒಂದೊಂದೆ ಟೈಲ್ಸ್​ಗಳನ್ನು ಪೀಸ್​ ಪೀಸ್​ ಮಾಡುತ್ತಾನೆ. ಈ ವೇಳೆ ಗೋಡೆಯ ಒಳಗಿನ ದೃಶ್ಯ ಬೆಚ್ಚಿ ಬೀಳಿಸುವಂತಿತ್ತು. ಗೋಡೆ ಒಡೆದ ಬೆನ್ನಲ್ಲೇ ಚಿನ್ನದ ನಾಣ್ಯಗಳ ರಾಶಿ ಸುರಿಯುತ್ತದೆ. ಟೈಲ್ಸ್​ ಅನ್ನು ಸಂಪೂರ್ಣವಾಗಿ ತೆಗೆದ ನಂತರ, ನಾಣ್ಯಗಳ ಹಿಂದೆ ಒಂದು ಕಬ್ಬಿಣದ ಲಾಕರ್ ಸಹ ಪತ್ತೆಯಾಗುತ್ತದೆ.

ಕಬ್ಬಿಣದ ಲಾಕರ್ ತೆರೆಯಲು ಕೀ ಕೋಡ್ ಅಗತ್ಯವಿರುತ್ತದೆ. ಎಷ್ಟೇ ಬಾರಿ ಪ್ರಯತ್ನಿಸಿದರೂ ಲಾಕರ್​ ತೆರೆದುಕೊಳ್ಳುವುದಿಲ್ಲ. ಆದ್ದರಿಂದ, ಪೆಟ್ಟಿಗೆಯನ್ನು ಒಡೆಯಲು ಎರಡು ಅಥವಾ ಮೂರು ಇಟ್ಟಿಗೆಗಳನ್ನು ಬಳಸುತ್ತಾರೆ. ಕೊನೆಗೆ ಪೆಟ್ಟಿಗೆಯ ಬಾಗಿಲು ತೆರೆದು ಒಳಗಿರುವುದನ್ನು ನೋಡಿದಾಗ ಅದರಲ್ಲಿ ಕರೆನ್ಸಿ ನೋಟುಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು, ವಜ್ರಗಳು, ನಗದು, ಮೊಬೈಲ್ ಫೋನ್ ಮತ್ತು ಸಣ್ಣ ಗನ್ ಪತ್ತೆಯಾಗಿದೆ.

ನವೆಂಬರ್​ 29ರಂದು brightside.official ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಆಗಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈವರೆಗೆ 11 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 49 ಸಾವಿರಕ್ಕೂ ಅಧಿಕ ಮಂದಿ ವಿಡಿಯೋ ಲೈಕ್ಸ್​ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಗೈದಿದ್ದು, ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿದರೆ ಸ್ಟಂಟ್‌ನಂತೆ ತೋರುತ್ತದೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಇದು ಕೇವಲ ವೀಕ್ಷಣೆ ಮತ್ತು ಲೈಕ್ಸ್​ಗಾಗಿ ಮಾಡಿರುವ ವಿಡಿಯೋ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಅಲ್ಲದೆ, ಅವು ನಕಲಿ ಚಿನ್ನಗಳು, ನಾಣ್ಯಗಳು ಕೂಡ ನಕಲಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)