ಪ್ರವಾದಿ(ಸ) ಮುಹಮ್ಮದ್, ಅವರು ಒಮ್ಮೆ ತಮ್ಮ ಸಹಚರರಿಗೆ, ‘ನೀವು ಧರ್ಮದ ವಿವರಗಳನ್ನು ನನ್ನಲ್ಲಿ ಕೇಳಿ ತಿಳಿದುಕೊಳ್ಳಬಹುದು’ ಎಂದರು. ಆದರೆ ಇದು ಭಕ್ತರಿಗೆ ಅಷ್ಟು ಸುಲಭದ ಪ್ರಶ್ನೆ ಆಗಿರಲಿಲ್ಲ. ಜನರಿಗೆ ಪ್ರವಾದಿಯ ಮೇಲೆ ಗೌರವ ಹೆಚ್ಚಾಗಿದ್ದುದರಿಂದ ಪ್ರಶ್ನೆ ಕೇಳುತ್ತಿರಲಿಲ್ಲ, ಸಂಶಯ ನಿವಾರಣೆಗೆ ಪ್ರಯತ್ನಿಸುತ್ತಿರಲಿಲ್ಲ. ಹೊರಗಿ ನಿಂದ ಯಾರಾದರೂ ಅಪರಿಚಿತರು ಆಗಮಿಸಿ, ಪ್ರಶ್ನೆ ಕೇಳಿದರೆ ಅದರ ಪ್ರಯೋಜನ ತಮಗೂ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಹೀಗಿರುವಾಗ ಒಂದು ದಿನ ಒಬ್ಬ ವ್ಯಕ್ತಿ ಪ್ರವಾದಿಯ ಬಳಿ ಬಂದು ಹೀಗೆ ಕೇಳಿದನು: ‘ಅಲ್ಲಾಹನ ಸಂದೇಶವಾಹಕರೇ, ಇಸ್ಲಾಂ ಎಂದ
ರೇನು?’ ಅದಕ್ಕೆ ಪ್ರವಾದಿಯವರು, ‘ಯಾರನ್ನೂ ದೇವರ ಸಹಭಾಗಿ ಯನ್ನಾಗಿಸದಿರುವುದು, ನಮಾಜ್ ಮಾಡುವುದು, ಅಲ್ಲಾಹನ ಮಾರ್ಗದಲ್ಲಿ (ಜಕಾತ್) ಸಂಪತ್ತನ್ನು ದಾನ ಮಾಡುವುದು, ರಂಜಾನ್ ತಿಂಗಳಲ್ಲಿ ಉಪವಾಸ (30 ದಿನ) ವ್ರತವನ್ನು ಆಚರಿಸುವುದು, ಅಲ್ಲಾಹನ ಮಾರ್ಗದಲ್ಲಿ ಸದಾಚಾರಗಳನ್ನು ಜಾರಿಗೆ ತಂದು, ಇತರರಿಗೆ ಬೋಧಿಸುವುದು’ ಎಂದು ಹೇಳಿದರು. ಅದನ್ನು ಆಲಿಸಿದ ವ್ಯಕ್ತಿ, ತಾವು ಹೇಳಿದ್ದೆಲ್ಲವೂ ಸರಿಯಾಗಿದೆ ಎಂದನು. ಜತೆಗೆ, ಈಮಾನ್ ಎಂದರೇನು? ಎಂದು ಪ್ರಶ್ನಿಸಿದನು. ಅಲ್ಲಾಹನನ್ನು, ಅಲ್ಲಾಹನ ಪವಿತ್ರ ಗ್ರಂಥಗಳನ್ನು, ಅಲ್ಲಾಹನ ಪ್ರವಾದಿಗಳನ್ನು ನಂಬುವುದು. ಸಾವಿನ ನಂತರ ಜೀವಂತ ಎಬ್ಬಿಸಲ್ಪಡುವುದು ಮತ್ತು ಈ ಜಗತ್ತಿನಲ್ಲಿ ನಡೆಯುವುದೆಲ್ಲವೂ ಅಲ್ಲಾಹನ ವಿಧಿನಿಯಮಕ್ಕೆ ಅನುಗುಣವಾಗಿ ನಡೆಯುವುದೆಂದು ದೃಢವಾಗಿ ನಂಬುವುದು ಎಂದರು. ಪ್ರವಾದಿಯವರ(ಸ) ಆ ಮಾತನ್ನು ಆಲಿಸಿದ ಆ ವ್ಯಕ್ತಿ, ನೀವು ಹೇಳಿದ್ದು ಸರಿ, ಸತ್ಯವೆಂದನು. ನಂತರ ಆ ವ್ಯಕ್ತಿ ಎಹ್ಸಾನ್ ಎಂದರೇನೆಂದು ಕೇಳಿದನು. ಅದಕ್ಕೆ ಪ್ರವಾದಿ ಹೀಗೆಂದರು, ಎಹ್ಸಾನ್ ಎಂದರೆ ನೀನು ಅಲ್ಲಾಹನನ್ನು ನೋಡುತ್ತಿರು ವೆಯೋ ಎಂಬಂತೆ ಅವನಿಗೆ ಭಯಪಡುವುದು, ಒಂದು ವೇಳೆ ನೀನು ಅವನನ್ನು ನೋಡದಿದ್ದರೂ ಅವನಂತೂ ನಿನ್ನನ್ನು ನೋಡುತ್ತಿದ್ದಾನೆ. ಆಗ ಅವನು ಹೇಳಿದನು, ತಾವು ಸರಿಯಾದ ಉತ್ತರವನ್ನೇ ನೀಡಿದ್ದೀರಿ. ಪ್ರವಾದಿಯವರೊಡನೆ(ಸ) ಅನೇಕ ಮೂಲಭೂತ ವಿಶ್ವಾಸಗಳ ಬಗ್ಗೆ ತಿಳಿದುಕೊಂಡನು. ತಿಳಿದಿದ್ದನ್ನು ತಾಳೆಹಾಕಿ ನೋಡಿ, ಸತ್ಯವನ್ನರಿತುಕೊಂಡು ಸಮಾಧಾನ ಚಿತ್ತನಾದನು.