ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲಾಧ್ಯಂತ ಬುಧವಾರ ವಿಶ್ವಗುರು, ಜಗಜ್ಯೋತಿ ಬಸವಣ್ಣನ ಜಯಂತಿಯನ್ನು ಸಾಮಾಜಿಕ ಕಾರ್ಯಗಳ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರೆ, ವೆಂಕಟೇಶನಗರದ ಬಸವ ಕೇಂದ್ರದಲ್ಲಿ ರಕ್ತದಾನದ ಮೂಲಕ ಬಸವಣ್ಣನಿಗೆ ಗೌರವ ಸಮರ್ಪಿಸಲಾಯಿತು. ಮತ್ತೆ ಕೆಲವೆಡೆ ಭಕ್ತರಿಗೆ ಅಂಬಲಿ ದಾಸೋಹ ನೆರವೇರಿತು.
ವೆಂಕಟೇಶ್‌ನಗರದ ಬಸವಕೇಂದ್ರದಲ್ಲಿ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ವೆಂಕಟೇಶನಗರದ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರರ ಪುತ್ಥಳಿಯ ಪಲ್ಲಕ್ಕಿ ಉತ್ಸವ ನೆರವೇರಿತು. ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಕಳೆ ನೀಡಿದವು. ಬೆಳವಾಡಿ ಭಜನಾ ತಂಡದ ಕಲಾವಿದರ ಭಜನೆ ವಿಶೇಷವಾಗಿ ಗಮನ ಸೆಳೆಯಿತು.
ನಂತರ ಬಸವ ಕೇಂದ್ರದಲ್ಲಿ ನೂರಾ ಎಂಟು ಬಸವ ನಾಮಾವಳಿ ಹೇಳಿ ಬಸವೇಶ್ವರರನ್ನು ಪೂಜಿಸಲಾಯಿತು. ಕಾಯಕ ಯೋಗಿಗಳಾದ ಪೌರಕಾರ್ಮಿರನ್ನು ಸನ್ಮಾನಿಸಲಾಯಿತು. ನಂತರ ರಕ್ತಾಮೃತ ದಾಸೋಹವನ್ನು ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಮುಖಂಡರಾದ ಎಚ್.ಸಿ.ಯೋಗೀಶ್, ಮಹಾರುದ್ರ, ತಮ್ಮಡಿಹಳ್ಳಿ ನಾಗರಾಜ್, ಸಂತೋಷ್ ಬಳ್ಳೆಕೆರೆ ಮತ್ತಿತರರು ಉಪಸ್ಥಿತರಿದ್ದರು.
ಬಸವ ಜಯಂತಿ ಅಂಗವಾಗಿ ನಗರದ ಹದಿನೈದಕ್ಕೂ ಹೆಚ್ಚು ಸ್ಥಳಗಳಲ್ಲಿ ಅಂಬಲಿ ದಾಸೋಹ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ಕೆ ಶರಣ ಸಾಹಿತ್ಯ ಪರಿಷತ್, ಅಕ್ಕನ ಬಳಗ, ಕದಳಿ ವೇದಿಕೆ, ವೀರಶೈವ ಯುವ ಬಳಗ, ಲಿಂಗಾಯತ ವೀರಶೈವ ಸಮಾಜ ಸೇರಿ ಹಲವು ಸಂಘಟನೆಗಳು ಕೈ ಜೋಡಿಸಿದ್ದವು.