ಶಿವಮೊಗ್ಗದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ರುದ್ರೇಗೌಡ, ಎಚ್.ಎಂ.ಚಂದ್ರಶೇಖರಪ್ಪ, ಎಸ್.ಪಿ.ದಿನೇಶ್, ಎನ್.ಜೆ.ರಾಜಶೇಖರ್, ಡಾ. ಧನಂಜಯ ಸರ್ಜಿ ಇತರರಿದ್ದರು. 
ನ್ಯೂಸ್

ಸಕಲ ಜೀವಗಳಿಗೆ ಲೇಸು ಬಯಸಿದ ಬಸವಣ್ಣ

ಶಿವಮೊಗ್ಗ: ಸಾಂಸ್ಕೃತಿಕ ನಾಯಕನಾಗಿ ಇತಿಹಾಸ ಸೃಷ್ಟಿಸಿ ಇಡೀ ವಿಶ್ವವೇ ಬೆರಗಾಗಿ ನೋಡುವಂತೆ ಮಾಡಿದ ಪುಣ್ಯಪುರುಷ ಬಸವಣ್ಣ. ವಿಶ್ವಗುರು ಆಗಿರುವ ಅವರೊಂದು ಶಕ್ತಿ ಮತ್ತು ಚೈತನ್ಯ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸಾಮೀಜಿ ಬಣ್ಣಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಗಾಂಧಿ ಪಾರ್ಕ್ ಎದುರು ಶುಕ್ರವಾರ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದಿಂದ ವಿಶ್ವಮಾನವ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಶೀರ್ವಚನ ನೀಡಿದರು.
ಸಕಲ ಜೀವಿಗಳಿಗೆ ಲೇಸು ಬಯಸಿದವರು ಬಸವಣ್ಣ. ಅವರ ತತ್ವಾದರ್ಶಗಳು ಜಗತ್ತಿಗೆ ಮಾದರಿ ಮತ್ತು ಇಂದಿಗೂ ಪ್ರಸ್ತುತ. ಅವರ ಆದರ್ಶಗಳು ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಒಂದು ಹೊಸ ಮನ್ವಂತರವೇ ಆಗಿದೆ ಎಂದರು.
ಒಂದು ದೇಶ ತನ್ನನ್ನು ತಾನು ಪರಿಚಯಿಸಿಕೊಳ್ಳಲು ಅಲ್ಲಿನ ಸಂಸ್ಕೃತಿ ಮುಖ್ಯವಾಗುತ್ತದೆ. ನಾಡಿನ ಸಂಸ್ಕೃತಿಯೇ ವಿಶಿಷ್ಟ. ಬಸವಣ್ಣನ ಆಡಳಿತ ವ್ಯವಸ್ಥೆ ಸರ್ವಕಾಲಕ್ಕೂ ಮಾದರಿ. ಎಲ್ಲ ಧರ್ಮಗಳಿಗೂ ಸಮಾನತೆ ಸಾರಿದ ಅವರ ವಚನಗಳು ಸಾರ್ವಕಾಲಿಕವಾಗಿದ್ದು, ಸರ್ವಧರ್ಮಗಳಿಗೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.
ಕಾಯಕವೇ ಕೈಲಾಸವೆಂದು ಸಾರಿದವರು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಹೇಳುತ್ತ ಸಮಾಜದಲ್ಲಿ ಹೆಣ್ಣು-ಗಂಡು ಎಂಬ ತಾರತಮ್ಯವಿಲ್ಲದೆ ಸಮಾಜವನ್ನು ಬೆಳೆಸಬೇಕು ಎಂದಿದ್ದರು. ಹಾಗಾಗಿ ಅವರ ಚಿಂತನೆ, ತತ್ವಾದರ್ಶಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎಂದರು.
ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಎಂಎಲ್‌ಸಿ ಎಸ್.ರುದ್ರೇಗೌಡ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಎಸ್.ಪಿ.ದಿನೇಶ್, ಎನ್.ಜೆ.ರಾಜಶೇಖರ್, ಡಾ. ಧನಂಜಯ ಸರ್ಜಿ, ವೈ.ಎಚ್.ನಾಗರಾಜ್, ಮಹೇಶ್‌ಮೂರ್ತಿ, ಜಿ.ವಿಜಯ್‌ಕುಮಾರ್, ಬಳ್ಳಕೆರೆ ಸಂತೋಷ್, ಶಾಂತಾ ಆನಂದ್, ಅನಿತಾ ರವಿಶಂಕರ್, ತಾರಾನಾಥ್, ಗಣೇಶ ಅಂಗಡಿ, ಮಹೇಶ್ವರಪ್ಪ ಉಪಸ್ಥಿತರಿದ್ದರು.