ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು/ಏನ ಮಾಡಿದಡೇನಯ್ಯ ಎನ್ನಲ್ಲಿ ದಿಟವಿಲ್ಲದನ್ನಕ್ಕರ?/
ಏನ ಹಮ್ಮಿದರೇನಯ್ಯ ಎನ್ನಲ್ಲಿ ದಿಟವಿಲ್ಲದನ್ನಕ್ಕರ?/ಎನ್ನ ಪುಣ್ಯದ ಫಲ, ಕೂಡಲಸಂಗಮದೇವ/
ಬಾಯಿನದುಂಡಗೆ ತೋಯನಟ್ಟಂತಾಯಿತ್ತು ( ಶೂನ್ಯ ಸಂ.ಪುಟ-185)
ಬಸವಣ್ಣ-ತನ್ನ ಅಂತರಂಗದಲ್ಲಿರುವ ದಿಟದ ನೆಲೆಯ ಬಲ್ಮೆಯನ್ನು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ. ಬಸವಣ್ಣನ ಮನಸ್ಸು - ದೇಹ ಹಗಲು-ಇರುಳು ಪ್ರಭುವಿಗಾಗಿಯೇ ಕಾಯುತ್ತಿವೆ. ಅವನ ಹನ್ನೆರಡು ವರ್ಷಗಳ ಕಾಯುವಿಕೆಯ ಪುಣ್ಯದ ಫಲ ಅಲ್ಲಮನ ಬರುವಿಕೆಯಲ್ಲಿದೆ. ಅಲ್ಲಮನು ಬಂದರೆ ಬಾಯಿಗೆ ಹಾಲಿನಿಂದ ಮಾಡಿದ ಕೀರನ್ನು ಕುಡಿದಷ್ಟು ಸಂತೋಷವಾಗುತ್ತದೆ!
ಬಸವಣ್ಣನವರು ರಚಿಸಿರುವ ಶೂನ್ಯ ಸಿಂಹಾಸನವು ಮೂರ್ತ ಸ್ವರೂಪದ್ದೂ ಹೌದು. ಅಮೂರ್ತಸ್ವರೂಪದ್ದೂ ಹೌದು! ಅದು ಸಾಮಾನ್ಯ ಭಕ್ತರಿಗೆ ಅದ್ಭುತವೂ ಆಕರ್ಷಕವೂ ಆದ ಸಿಂಹಾಸನ. ಆದರೆ, ಅದು ಸಾಧಕರಿಗೂ ಶರಣರಿಗೂ ಅನುಭಾವಿಗಳಿಗೂ ತಾತ್ವಿಕ ಸ್ವರೂಪದ ಸಿಂಹಾಸನ. ಇದು ರಾಜರಿಂದ ನಿರ್ವಣಗೊಂಡ ಸಿಂಹಾಸನವಲ್ಲ. ಅದು ವೀರಶೈವದರ್ಶನದ ಮೂಲಕ ನಿರ್ವಣಗೊಂಡಿದೆ. ಬಸವಣ್ಣನು ಶೂನ್ಯಸಿಂಹಾಸನವನ್ನು ರೂಪಿಸುವ ಮೊದಲು ಯೋಗದ ನೆಲೆಯಲ್ಲಿ ನಿಂತುಕೊಂಡನು. ಪಶ್ಚಿಮಚಕ್ರದಲ್ಲಿ ವಾಯುವನ್ನು ಬಂಧಿಸಿದ. ತನ್ನ ಸಕಲ ಇಂದ್ರಿಯಗಳನ್ನು ನಿಗ್ರಹಿಸಿದ. ಅವನ್ನೆಲ್ಲಾ ಅಂತಃಕರಣ ಶುದ್ಧಿಯ ಪ್ರಖರತೆಯಲ್ಲಿ ಅಂತರ್ಗತಗೊಳಿಸಿಕೊಂಡ. ಆಗ ಬಸವಣ್ಣನಲ್ಲಿ ದಿವ್ಯತೇಜಸ್ಸು ಶೋಭಿಸಿತು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ತಮ್ಮ ತಮ್ಮಲ್ಲಿದ್ದ ಶತ್ರುತ್ವವನ್ನು ಕಳೆದುಕೊಂಡು ಮಿತ್ರತ್ವವನ್ನು ತಾಳಿದವು.
ಅಸ್ತ್ರ, ಅರ್ಥ, ಯೌವನ, ಸ್ತ್ರೀ, ವಿದ್ಯೆ, ಕುಲ, ರೂಪು, ಉದ್ಯೋಗಗಳೆಂಬ ಎಂಟು ಮದ್ದಾನೆಗಳ ಮದಗಳು ಇಲ್ಲವಾದುವು. ಆಗ ಅಲ್ಲಮನಲ್ಲಿ ರಾಜಯೋಗವು ಶೋಭಿಸಿತು. ಅವನ ಹೃದಯದಲ್ಲಿ ಅಳವಟ್ಟ ಯೋಗಶಕ್ತಿಯ ಕೇಂದ್ರವು ಯಾವುದೇ ಬಾಧೆಯಿಲ್ಲದೆ ಕೆಲಸ ಮಾಡತೊಡಗಿತು. ಬಸವಣ್ಣ ಅಲ್ಲಮನ ಬರವನ್ನು ಹಾರೈಸುತ್ತಿದ್ದಾಗ, ರಾಜಯೋಗದಲ್ಲಿ ಅವನು ನೆಲೆನಿಂತದ್ದು ಸಹಜ ಯೋಗವೇ ಸರಿ! ಇಂಥವನು ಅಲ್ಲಮನಂಥ ಮಹಾಯೋಗಿಗೆ ತಕ್ಕುದಾದ ಸಿಂಹಾಸನ ರಚಿಸಲು ತನ್ನನ್ನು ತಾನೇ ಸಮರ್ಪಿಸಿಕೊಂಡ. ಈ ಸಂಗತಿಯನ್ನು ಅತ್ತ ಚಾಮರಸ ಪ್ರಭುಲಿಂಗಲೀಲೆಯಲ್ಲೂ. ಇತ್ತ ಪ್ರಥಮ ಶೂನ್ಯಸಂಪಾದನಕಾರನಾದ ಶಿವಗಣಪ್ರಸಾದಿ ಮಹಾದೇವಯ್ಯನೂ ತಮ್ಮ ತಮ್ಮ ರೀತಿಯಲ್ಲಿ ಕಂಡರಿಸಿ ಕೊಟ್ಟಿದ್ದಾರೆ. ನಾವು ಚಾಮರಸನ ಮೂಲಕ ‘ಶೂನ್ಯಸಿಂಹಾಸನ’ ರಚನೆಯನ್ನು ಯೌಗಿಕ ವಿಧಾನದಲ್ಲಿ ಮಾತ್ರ ಕಾಣಬಹುದಾಗಿದೆ.
ಬಸವಣ್ಣನು ಅನುಭಾವದ ಮಾರ್ಗವನ್ನು ಹಿಡಿದು ಕುಂಡಲಿಯ ಹೆಬ್ಬಾಗಿಲಲ್ಲಿ ಪ್ರವೇಶ ಮಾಡಿದ ಕಾಮನನ್ನು ಬಂಧಿಸಿದ. ಅನಂತರ ಹೃದಯದ ಅನಾಹತಚಕ್ರದ ಬಾಗಿಲಿನಲ್ಲಿ ಯಮನನ್ನು ಸೆರೆಹಿಡಿದುಬಿಟ್ಟ. ಅನುಭಾವ ಮುಖದಲ್ಲಿ ಹುಬ್ಬುಗಳ ನಡುವಿನ ಆಜ್ಞಾಚಕ್ರದಲ್ಲಿ ಆಧಿಪತ್ಯವನ್ನು ಜಾಗೃತಗೊಳಿಸಿಕೊಂಡ. ಅವನಲ್ಲಿ ನಿರ್ಗಣಯೋಗ ಮಾರ್ಗವು ತನಗೆ ತಾನೇ ತೆರೆದುಕೊಂಡಿತು. ಆ ಮಾರ್ಗದಿಂದ ಅಲ್ಲಮಪ್ರಭು ಬರುವಿಕೆಯ ನೆಲೆಯನ್ನು ತಿಳಿಯಲು ಪೂರ್ವಸಿದ್ಧತೆಯನ್ನು ಬಸವಣ್ಣ ಮಾಡಿಕೊಂಡ! ಅಣ್ಣ ಬಸವಣ್ಣನು, ತನ್ನ ತಲೆಯ ಪಶ್ಚಿಮಚಕ್ರದಲ್ಲಿ ಕಂಡಂಥ ಪ್ರಕಾಶಮಾನವಾದ ಪೀಠಕ್ಕೆ ಬಾಹ್ಯರೂಪವನ್ನು ಕೊಟ್ಟು,
ಮರಕತಗಳೇ ಮುಖ್ಯವಾದ ರತ್ನಗಳನ್ನು ಪೋಣಿಸಿ ಸಿಂಹಾಸನವನ್ನು ನಿರ್ವಣಮಾಡಿದ. ನಂತರ ಬಸವಣ್ಣನು ಅದಕ್ಕೆ ‘ಶೂನ್ಯ ಸಿಂಹಾಸನ’ ಎಂದು ಹೆಸರನ್ನು ಕೊಟ್ಟ. ಅದು ರಚನೆಗೊಂಡ ಪರಿಯಂತೂ ಅದ್ಭುತವಾದುದು. ಚಂದ್ರಕಾಂತ ಶಿಲೆಯ ತೆಳ್ಳನೆಯ ಹಾಳೆಗಳಿಂದ ಕಟ್ಟಿದ ಸುತ್ತುಮೆಟ್ಟಿಲು, ಅದರ ಹಿಂದೆ ಅಸಮಾನವಾದ ಏಳುಸುತ್ತಿನ ಗೋಡೆಗಳು ನಿರ್ಮಾಣಗೊಂಡವು. ನವರತ್ನಗಳನ್ನು ಬಳಸಿ ಸಪ್ತಲೋಹಗಳ ತಳಪದ, ಮೇಲು ಮೇಲಕ್ಕೆ ಒಂದರಮೇಲೆ ಒಂದರಂತೆ ಏಳು ಹಂತಗಳು ನಿರ್ಮಾಣಗೊಂಡವು. ಚಾಮರಸನ ಆನುಭಾವಿಕ ಕವಿನುಡಿಯಲ್ಲಿ ನಾವು ಕೇಳೋಣ:
ಹೊರವಳಯದೊಂಬತ್ತು ಬಾಗಿಲು/ಮೆರೆೆವ ಮಧ್ಯಕೆ ನಾಲ್ಕುಬಾಗಿಲು/ನೆರೆವಿರಾಜಿಸುವೆರಡು ಬಾಗಿಲು ಗರ್ಭವಳಯ ದಲಿ/ಮಿಳುಪ ಮೇಲಣ ಕೆಲಸಗತಿ ಕಣ್/ತೆರೆವ ಬಾಗಿಲು ಶಿಖರದಲಿ ಮಹ/ ದಳೆೆವಿನಂಬರಪೀಠವೆಸೆದುದು ಬಸವನಾಜ್ಞೆ ಯಲಿ (ಪ್ರಭು-ಲೀಲೆ 21-12) - ಹೊರ ಆವರಣದಲ್ಲಿ ಒಂಬತ್ತು ಬಾಗಿಲುಗಳು, ಮಧ್ಯದಲ್ಲಿ ನಾಲ್ಕು ಬಾಗಿಲುಗಳು, ಗರ್ಭಾಂಗಣ ದಲ್ಲಿ ಎರಡು ಬಾಗಿಲುಗಳು, ಶಿಖರದಲ್ಲಿ ಮೇಲ್ಗೆಲಸದಿಂದ ಅಚ್ಚರಿಗೊಳಿಸುವ ಒಂದು ಬಾಗಿಲು-ಬಸವನ ಸೂಚನಾನುಸಾರ ಶೂನ್ಯಪೀಠವು ಶೋಭಿಸಿತು.