ಶಿವಗಣ ಪ್ರಸಾದಿಯು ಬಸವಣ್ಣ ನೆಲೆನಿಂತದ್ದನ್ನು ‘ಬಸವರಾಜ ದೇವರಮಠ’ ಎಂದೇ ಕರೆದಿದ್ದಾನೆ. ಇಲ್ಲಿ ಮನೆಗೂ ಮಠಕ್ಕೂ ವ್ಯತ್ಯಾಸವುಂಟು. ‘ಮನೆ ಎಂಬುದು ಕಷ್ಟ-ಸುಖಗಳ ಪಡಸಾಲೆ. ಇಲ್ಲಿ ಸ್ವಾರ್ಥವೇ ಪ್ರಾಧಾನ್ಯ. ಇಲ್ಲಿರುವುದೆಲ್ಲಾ ಅಹಂಭಾವ. ಲೋಕಸುಖದ ವಾಸನೆಗಾಗಿ ತೆರೆದಿಟ್ಟಿರುವ ಭವದ ಕೂಪವಿದು. ಆದರೆ, ಮನೆಗೆ ಸಲ್ಲುವ ಯಾವ ಮಾತೂ ಶ್ರೀಮಠಕ್ಕೆ ಸಲ್ಲುವುದಿಲ್ಲ. ಮಠವು ಸಕಲ ಮಹಾಂತರ ಬೀಡು. ಅದೊಂದು ಶಿವಲೋಕ. ‘ಮಠ’ಗಳು ಜಾತಿ, ವರ್ಣ, ಲಿಂಗ ಯಾವುದೇ ತಾರತಮ್ಯವಿಲ್ಲದೆ, ಎಲ್ಲರೊಳಗೊಂದಗಿಪ್ಪ ಕೈಲಾಸ ಹೇಗೋ ಹಾಗೆ. ಕಳೆದ ಎಂಟುನೂರು ವರ್ಷಗಳ ಹಿಂದಿದ್ದ ಮಠಗಳು ಶಿವಮಯವೇ ಆಗಿದ್ದುವು. ಕೋಟ್ಯನುಕೋಟಿ ಮಹಾಪಾತಕವನ್ನು ಮಾಡಿದವನೊಬ್ಬ ಬಸವರಾಜ ದೇವರ ಅಂಗಳವನ್ನು ಕಂಡರೆ ಸಾಕು ಅವನ ಪಾತಕಗಳೆಲ್ಲಾ ಕಳಚಿಬೀಳುತ್ತವೆ ಎಂಬುದು ಅಲ್ಲಮನ ಮಾತು.
ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳು ನೆಲೆಸಿಪ್ಪವು/ಇಂತಪ್ಪ ಶರಣಸಂಗನ ಬಸವಣ್ಣನ/ಅಂಗಳವ ಕಂಡೆನಾಗಿ ಗುಹೇಶ್ವರ/ ಲಿಂಗಕ್ಕೆ ಕಂಗಳ ತೃಪ್ತಿಯಾಯಿತು.(ಶಿವಗಣಪ್ರಸಾದಿ- ಶೂನ್ಯಸಂಪಾದನೆ ಪುಟ-70)
ಇದು ಅಲ್ಲಮನ ಮನದುಂಬಿದ ಮಾತು. ಬಸವರಾಜದೇವರ ಮಠದ ಅಂಗಳವೇ ಇಷ್ಟಾದರೆ, ಒಳಹೊಕ್ಕರೆ ಆಗುವ ಅನುಭವ ಎಂಥದ್ದು? ನಾವು ಶಿವಗಣಪ್ರಸಾದಿಯನ್ನು ಅನುಸರಿಸಿಕೊಂಡು ಬಸವಣ್ಣನ ಶ್ರೀಮಠವನ್ನು ಕಾಣೋಣ!
ಪ್ರಭು ಅಲ್ಲಮ ಮತ್ತು ಸಿದ್ಧರಾಮಯ್ಯ ಇಬ್ಬರೂ ಬಸವರಾಜ ದೇವರ ಶ್ರೀಮಠದ ಬಾಗಿಲ ಮುಂದೆ ನಿಂತಿದ್ದಾರೆ. ಆ ಬಾಗಿಲಲ್ಲಿ ಹೋಗುವವರೆಷ್ಟೋ ಬರುವವರೆಷ್ಟೋ? ಅಲ್ಲಿ ‘ವಚನಶಾಸ’ವನ್ನು ಕೇಳುವ ಹೇಳುವ ಶಿವತತ್ತ್ವವಿದ್ಯಾಭ್ಯಾಸದವರು ಇದ್ದಾರೆ. ಶಿವಯೋಗದಲ್ಲಿ ಆರೂಢರಾದ ಪರಮರಾಜ ಯೋಗಿಗಳು ಅಲ್ಲಿದ್ದಾರೆ. ಅಲ್ಲಿ ಶಿವಾನುಭವಗೋಷ್ಠಿ ನಡೆಯುತ್ತಿದೆ. ಆ ಗೋಷ್ಠಿಯಲ್ಲಿ ಲೌಕಿಕ ಭಾವಗಳನ್ನು ಮರೆತು ಶಿವಪ್ರಸಂಗದಲ್ಲೇ ತಲ್ಲೀನರಾದ ಮಹಾನುಭಾವಿಗಳಿದ್ದಾರೆ. ಆಚಾರಲಿಂಗದಲ್ಲಿ ಸದಾಚಾರವೇ ಪ್ರಾಣವಾಗಿರುವಂಥ ಅರುವತ್ತನಾಲ್ಕು ಶೀಲಗಳಲ್ಲಿ ದೃಡವ್ರತರಾದ ಶೀಲವಂತರಿದ್ದಾರೆ. ತಮ್ಮ ಕರಸ್ಥಲದಲ್ಲಿರುವ ಲಿಂಗಕ್ಕೆ ಅಷ್ಟವಿಧವಾದ ಅರ್ಚನೆ ಮತ್ತು ಶೋಡಶೋಪಚಾರ ಮಾಡುವ ಲಿಂಗಾರ್ಚನೆ ಮಾಡುವ ಪರಾಯಣರು ಇದ್ದಾರೆ. ಇಷ್ಟಲಿಂಗದಲ್ಲಿ ದೃಷ್ಟಿಯನ್ನು ಇಟ್ಟು, ಭಾವವನ್ನು ಅದರೊಳಗೆ ಅಚ್ಚೊತ್ತಿ, ಅನಿಮಿಷ ದೃಷ್ಟಿಯಿಂದ ಆ ಲಿಂಗವನ್ನು ನೋಡಿನೋಡಿ ಪರವಶರಾದ ಮಹಾಲಿಂಗ ನಿಷ್ಠರೂ ಅಲ್ಲುಂಟು. ಅಲ್ಲಿ ಶ್ರೀಗುರುಪಾದದಲ್ಲಿಯೇ ಮಗ್ನರಾಗಿರುವ ಗುರುಭಕ್ತಿಯುಕ್ತರು ಇದ್ದಾರೆ. ಅಲ್ಲಿ ಸದ್ಭಕ್ತಿ ಗಣಗಳು ನೆರೆದಿದ್ದಾರೆ. ಜಂಗಮವೆ ತಮ್ಮ ಪ್ರಾಣಲಿಂಗವೆಂದು, ಅರ್ಥ-ಪ್ರಾಣ-ಅಭಿಮಾನಗಳನ್ನು ಸಮರ್ಪಿಸಿಕೊಂಡಿದ್ದಾರೆ. ತ್ರಿಕರಣ ಶುದ್ಧಿಯಿಂದ ದಾಸೋಹವನ್ನು ಮಾಡುತ್ತಿರುವ ಸದ್ಭಕ್ತಿ ಗಣಂಗಳು ಅಲ್ಲುಂಟು.
ಆ ಬಸವರಾಜದೇವರ ಮಠದ ಅಂಗಳದಲ್ಲಿ ಮರ್ತ್ಯಲೋಕದ ಮಹಾಮನೆಗೆ ರುದ್ರಲೋಕದ ಶಿವಗಣಂಗಳು ಲಿಂಗಾರ್ಚನೆಗೆ ಬನ್ನಿ ರೆಂದು ಕರೆಯುವಂತಿರುವ ಉಪ್ಪರಗುಡಿ- ಸಿಂಧ- ಬಾವುಟಗಳಿವೆ. ಬಸವಣ್ಣನ ಭಕ್ತಿ-ಜ್ಞಾನಪ್ರಭ ಕುಡಿವರಿದು ಬೆಳೆದುದೊ ಎಂಬಂತಿ ರುವ ಸುವರ್ಣಕಳಶಗಳಿವೆ. ಹೀಗೆ, ಅನಂತಮುಖದಲ್ಲಿ ಒಪ್ಪುತ್ತಿರುವ ಸಂಗನ ಬಸವಣ್ಣನು ಇರುವ ಶಿವಾಲಯವನ್ನು ಅಲ್ಲಮಪ್ರಭು ಸಿದ್ಧರಾಮಯ್ಯ ಇಬ್ಬರೂ ಕಂಡರು. ಅವರು ಮತ್ತೆ ಮತ್ತೆ ನೋಡಿದರು. ತೃಪ್ತಿಯೇ ಆಗಲಿಲ್ಲ. ಅವರು ತಲೆದೂಗುತ್ತ ಹಾರೈಸಿದರು. ತಮ್ಮಲ್ಲಿ ತಾವೇ ಕೊರಗಿದರು. ಅವರ ಹೃದಯ ಕಮಲವು ಪರಮಾನಂದ ರಸದಲ್ಲಿ ಮುಳುಗಿ ಹೋಯಿತು.