ನಾವು ಈ ವಚನವನ್ನು ಒಂದೊಂದು ಹೆಜ್ಜೆಗೂ ಒಂದೆರಡು ಸಾಲುಗಳನ್ನು ತೆಗೆದುಕೊಂಡು ನಮ್ಮದನ್ನಾಗಿಸಿ ಕೊಳ್ಳೋಣ. ‘ಆದಿಯ ಲಿಂಗವ ಮೇದಿನಿಗೆ ತಂದು, ಮರ್ತ್ಯಲೋಕದಲ್ಲಿ ಮಹಾಮನೆಯ ಕಟ್ಟಿದನಯ್ಯ’ ಸಂಗನ ಬಸವಣ್ಣನು ಇಲ್ಲಿ ಮಹಾಮನೆಯ ಆಶಯ ಸುವ್ಯಕ್ತವಾಗಿದೆ. ಇದು ಕಲ್ಲಿನಿಂದ ಕಟ್ಟಿದ ಮನೆಯಲ್ಲ. ಆದಿಲಿಂಗವನ್ನು ತಂದು ಕಟ್ಟಿದ ಮಹಾಮನೆ. ‘ಆ ಮನೆಯ ನೋಡಲೆಂದು ಹೋದರೆ, ಆ ಗೃಹ ಹೊಗದ ಮುನ್ನವೆ ಎನ್ನ ನುಂಗಿತಯ್ಯ’ ಆ ಮನೆಯು ಆದಿಲಿಂಗದಿಂದ ರೂಪಿಸಿದ್ದು. ಈ ರೀತಿ ರೂಪಿತಗೊಂಡಿರುವ ಮನೆಗೆ ಪ್ರವೇಶಿಸುವ ಮೊದಲೆ ನುಂಗಿಬಿಟ್ಟಿದೆ. ಇದು ಲಿಂಗವು ಅಂಗವನ್ನು ಲೀನಗೊಳಿಸಿಕೊಳ್ಳುವ ಪರಿ. ಭವಿಗಳಾದ ಭಕ್ತರು ಅಲ್ಲಿ ಹೊಗುವ ಮುನ್ನವೇ ತಮ್ಮ ಅಂಗತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ‘ಅದಕ್ಕೆ ಕಂಬ ಒಂದು ತೊಲೆ ಆರು, ಜಂತೆ ವಲಗೆ ಮೂವತಾರು, ಧರೆಯಾಕಾಶವ ಹೊದ್ದದ ಕೆಸರುಗಲ್ಲು, ಒಂಬತ್ತು ಬಾಗಿಲು ಬೀಯಗವಿಕ್ಕಿಪ್ಪವು’. ಆ ಮನೆಯ ಕಂಬವೆಂದರೆ ಶಿವನ ಶರೀರ. ಅದರ ತೊಲೆ ಆರೆಂಬುದು ಷಟ್ಸ್ಥಲ, ಜಂತೆ-ವಲಗೆ ಮೂವತ್ತಾರು ಎಂಬುದು ಅಂಗದ ಗುಣಗಳು. ಒಂಬತ್ತು ಎಂಬುದು ದೇಹದ ಬಾಗಿಲುಗಳು!
‘ಬೇರೊಂದು ಬಾಗಿಲು ಉರಿಯನುಗುಳುತಿಪ್ಪುದು, ಮುತ್ತಿನ ಕಂಭದ ಮೇಲು ಕಟ್ಟಿನ ಮೇಲೆ ಮಾಣಿಕ್ಯದ ಶಿಖರಿ’ ಒಂಬತ್ತು ಬಾಗಿಲನ್ನು ಹೊರತುಪಡಿಸಿ, ಮತ್ತೊಂದು ಬಾಗಿಲು ಬೆಂಕಿಯನ್ನು ಉಗುಳುತ್ತಿದೆ. ಶಿವನ ಮನೆಗೆ ಹೊಕ್ಕವರು ತಮ್ಮೆಲ್ಲ ಅಹಂಕಾರವನ್ನೊ ಜಂಭವನ್ನೊ ಕಳೆದುಕೊಳ್ಳುವುದು ಅನಿವಾರ್ಯ. ದೇಹವೆಂಬ ಕಂಭದ ಉತ್ತಮಾಂಗವೇ ಶಿರ. ಅಲ್ಲಿ ಶಿವನ ಚಿತ್ಪ್ರಭೆಯಾದ ಮಾಣಿಕ್ಯ ಉಂಟು. ಶಿರಸ್ಸು ಸಹಸ್ರಾರವೂ ಹೌದು. ‘ಆ ಶಿಖರಿಯ ತುದಿಯಲ್ಲಿ ಬಿಳಿಯ ಹೊಂಗಳಸವಿಪ್ಪುದು. ಅದು ಕಾಂಬವರಿಗೆ ಕಾಣಬಾರದು; ಕಾಣಬಾರದವರಿಗೆ ಕಾಣ ಬಪ್ಪುದು ಶಿರವೇ ಬಿಳಿಯ ಕಳಸ. ಅಲ್ಲಿ ಅಮೃತತ್ವ ಉಂಟು. ಆ ಅಮೃತತ್ತ್ವ ಶಿವನ ಕೃಪೆಯಿಂದ ಮಾತ್ರ ಸಿಗಬಲ್ಲುದು. ‘ಅಲ್ಲಿ ಹತ್ತುಮಂದಿ ಪರಿಚಾರಕರು ಎಡೆಯಾಡುತಿಪ್ಪರು.’ ದಶವಾಯುಗಳು ಎಂದರೆ ಪ್ರಾಣ- ಅಪಾನ- ವ್ಯಾನ- ಉದಾನ- ಸಮಾನ. ನಾಗ ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯರೆಂಬುವರು ಶಿವನ ಹತ್ತು ಪರಿಚಾರಕರು. ‘ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು. ಒಬ್ಬಾಕೆ ಎಡೆಯಾಡುತಿಪ್ಪಳು. ಒಬ್ಬಾಕೆ ಲಿಂಗಾರ್ಚನೆ ನೀಡಿ ಕೊಡುತಿಪ್ಪಳು. ಒಬ್ಬಾಕೆ ಸಾಧನಂಗಳೆಲ್ಲವನು ಶೋಧಿಸಿ ತಂದು ಕೊಡುತಿಪ್ಪಳು. ಇಲ್ಲಿ ಒಂದೊಂದು ವಾಯುಗಳ ಕ್ರಿಯೆಯ ನೆಲೆಯನ್ನು ನಮಗೆ ಕಾಣಿಸುತ್ತಿದೆ. ಪ್ರತಿಯೊಂದು ವಾಯುಗಳು ತಮ್ಮ ಶರೀರ ಮತ್ತು ಅಂತಃಕರಣಗಳಲ್ಲಿ ವ್ಯಾಪಾರಗಳನ್ನು ನಿಲ್ಲಿಸಿ, ಅಧ್ಯಾತ್ಮಸಾಧನೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆಗ ವಾಯುಪ್ರಾಣಿಯಾಗಿದ್ದವನು ಲಿಂಗಪ್ರಾಣಿಯಾಗುತ್ತಾನೆ. ಆಗ ಮೇಲೆ ಹೇಳಿರುವ ಕ್ರಿಯೆಗಳು ತಿಳಿಯುವುದಕ್ಕೆ ಶರಣನಿಗೆ ಸಾಧ್ಯವಾಗುತ್ತದೆ.
ಬಸವಣ್ಣನ ‘ಮಹಾಮನೆ’ಯು ಸಮಸ್ತ ಶಿವಯೋಗಿಗಳ ಬೀಡು. ಶರಣರ ಸಾಧನೆಯ ರಂಗಸ್ಥಳ. ಈ ದೃಷ್ಟಿಯಿಂದ ನೋಡಿದರೆ, ಆಧ್ಯಾತ್ಮಿಕ ಕ್ರಿಯಾ ಸಂಕೇತ ಉದ್ದಕ್ಕೂ ಇಲ್ಲುಂಟು. ಶಿವಗಣ ಪ್ರಸಾದಿಯು ಅಲ್ಲಮನ ಮೂಲಕ ಹೇಳುವ ಮಹಾಮನೆಯ ಸಡಗರವನ್ನು ತುಸು ಗಮನಿಸಬಹುದು. ‘‘ಒಬ್ಬಾಕೆ ಉರಿಯಿಲ್ಲದ ಅಗ್ನಿಯಲ್ಲಿ ಪಾಕವ ಮಾಡುತಿಪ್ಪಳು. ಒಬ್ಬಾಕೆ ಲಿಂಗಜಂಗಮಕ್ಕೆ ನೀಡಿ ಊಡಿಸಿ ಉಣಿಸಿ ತೃಪ್ತಿಯ ಮಾಡುತಿಪ್ಪಳು. ಒಂದಡ್ಡಣಿಗೆಯ ಮೇಲೆ ಐದಗಲೊಳಿಟ್ಟು ಬೋನವನುಂಡರೆ ಪ್ರಮಥಗಣಂಗಳೆಲ್ಲರೂ ಅವನೊಕ್ಕುದ ಕೊಂಡಹೆವೆಂದು ಬಂದು, ಆ ಮನೆಯ ಹೊಕ್ಕಿ ನಿಶ್ಚಿಂತ ನಿವಾಸಿಗಳಾದರು.’ ಈ ವಚನದಲ್ಲಿ ‘ದಶವಾಯು’ಗಳ ಕ್ರಿಯಾವರ್ತನೆ ಉಂಟೆಂದು ತೋರುತ್ತಿದೆ.