ಇದು ಬ್ರಹ್ಮಸ್ಥಾನಕ್ಕೂ ಹಿರಿದೆನಿಸಿತು. ಭೂಮಿ, ಜಲ, ಅಗ್ನಿ, ವಾಯು, ಆಕಾಶ, ಆತ್ಮಗಳನ್ನು ಪೀಠದಲ್ಲಿ ನೆಲೆಗೊಳಿಸಿದ. ಬಸವಣ್ಣನು ಭೂಮಿಯ ನೆಲೆಯಲ್ಲಿ ಕಾಠಿಣ್ಯವನ್ನು, ಜಲದ ನೆಲೆಯಲ್ಲಿ ರಸವನ್ನು, ಅಗ್ನಿಯ ನೆಲೆಯಲ್ಲಿ ಬಿಸಿಯನ್ನು, ವಾಯುವಿನ ನೆಲೆಯಲ್ಲಿ ಗಾಳಿಯನ್ನು, ಆಕಾಶದ ನೆಲೆಯಲ್ಲಿ ಶಬ್ದಗುಣವನ್ನು, ಮನಸ್ಸು ನಿಲುಕದ ಅನುಪಮದ ಎಡೆಗೆ ಶೂನ್ಯವನ್ನು ನಿಲ್ಲಿಸಿ ಶೂನ್ಯಪೀಠವನ್ನು ನಿರ್ವಿುಸಿದ.
ನಮ್ಮ ದೇಹದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳುಂಟು. ಅವುಗಳಲ್ಲಿ ಈಡಾ, ಪಿಂಗಳ ಮತ್ತು ಸುಷುಮ್ನಾ ಎಂಬ ಮೂರು ನಾಡಿಗಳು ಪ್ರಮುಖವಾದುವು. ಆ ಮೂರೂ ನಾಡಿಗಳು ಬಸವಣ್ಣನಲ್ಲಿ ಬಲಗೊಂಡವು. ಎಂಟು ದಿಕ್ಕುಗಳಲ್ಲಿ ಅಷ್ಟಮದವನ್ನು ಸೂಚಿಸುವ ಎಂಟು ಆನೆಗಳು ಇರುವುದು ಸರಿಯಷ್ಟೆ! ಅವುಗಳನ್ನು ಬ್ರಹ್ಮಾಂಡದ ನೆಲೆಮನೆಯಂತೆ ಶೂನ್ಯಸಿಂಹಾಸನದಲ್ಲಿ ಇರಿಸಿದ. ಆ ಶೂನ್ಯಪೀಠವು ಮಹಾವೃಕ್ಷದಂತೆ ವಿರಾಜಿಸಿತು. ಓಂಕಾರ ಮಂತ್ರವೇ ಅದರ ಬೇರಾಗಿತ್ತು. ಎಲ್ಲಾ ಸ್ವರಗಳೂ ಅದರ ಬುಡವಾಗಿದ್ದವು. ಪಂಚಾಕ್ಷರಿ ಮಂತ್ರವೇ ಆಗ ವೃಕ್ಷದ ಶಾಖೆಯಾಗಿತ್ತು.
ಅಕ್ಷರಗಳ ಸಮೂಹವೇ ಚಿನ್ನದ ಹೂವುಗಳಾಗಿದ್ದವು. ಉತ್ತಮವಾದ ಪದಾರ್ಥಗಳೆಲ್ಲ ಆ ವೃಕ್ಷದ ಹಣ್ಣುಗಳಾಗಿದ್ದವು. ನಾದವೆಂಬ ವೃಕ್ಷದಂತೆ ಶೂನ್ಯಪೀಠದಲ್ಲಿ ಆ ಮಹಾವೃಕ್ಷವು ವಿರಾಜಿಸಿತು. ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಪಂಚಭೂತಗಳಷ್ಟೆ. ಇವುಗಳ ನೆಲೆಗಳಲ್ಲಿ ಹದಿನಾಲ್ಕು ಲೋಕಗಳ ಹೊಲಿಗೆಯನ್ನು ಬಸವಣ್ಣನು ಶೂನ್ಯಪೀಠಕ್ಕೆ ಹೊದಿಸಿದನು. ಆ ನಂತರ ಆತ್ಮತತ್ತ್ವದಲ್ಲಿ ಐಕ್ಯಪದವಿಯನ್ನು ನಿಲ್ಲಿಸಿದ. ಅಲ್ಲಿಂದ ಏಳನೆಯ ತುದಿಯಲ್ಲಿ ನಿರುಪಮ, ನಿರ್ವಿಕಾರಸ್ಥಲವನ್ನು ಶೂನ್ಯಪೀಠಕ್ಕೆ ಬಸವಣ್ಣ ಹೊದಿಸಿ ಸಂತೃಪ್ತಿಯನ್ನು ಪಡೆದ.
ಬಸವಣ್ಣನು ನಿರ್ವಿುಸಿದ ಶೂನ್ಯಸಿಂಹಾಸನವು ಅನನ್ಯವೂ ಭವ್ಯವೂ ದಿವ್ಯವೂ ಆಗಿತ್ತು. ಬಸವಣ್ಣನು ಅಲ್ಲಲ್ಲಿ ಶಕ್ತಿತತ್ತ್ವಗಳನ್ನು ಅಳವಡಿಸಿದ. ಅವನು ಮುಖ್ಯವಾದ ನಾಡಿಗಳನ್ನು ಅಲ್ಲಿಗಲ್ಲಿಗೆ ಅಳವಡಿಸಿ ಕರ್ಮ, ಭಕ್ತಿ, ಜ್ಞಾನ ತತ್ತ್ವಗಳನ್ನೂ ಸಗುಣ-ನಿರ್ಗಣ ಗಳನ್ನೂ ತಾನು ಅರಿತ ರೀತಿಯಲ್ಲಿ ವಿಸ್ತರಿಸಿ ಅಲ್ಲಮಪ್ರಭುವಿಗಾಗಿ ಶೂನ್ಯಪೀಠವನ್ನು ನಿರ್ವಿುಸಿದ. ಶಿವಕವಿ ಚಾಮರಸನು ಬಸವ ದಂಡಾಧೀಶನು ನಿರ್ವಿುಸಿದ ಶೂನ್ಯಪೀಠವನ್ನು ಅಲ್ಲಮಪ್ರಭು ಆರೋಹಣ ಮಾಡುವ ಬಗೆಯನ್ನು ಹೀಗೆ ಬಣ್ಣಿಸುತ್ತಾನೆ.
ಇನ್ನಳೆಯಬಹುದಾವನಿಂತೀ/ ಶೂನ್ಯಸಿಂಹಾಸನವನೇರಿದೊ/ಡೆನ್ನ ಹೃದಯಾಂಬುಜ ರವಿ ಪ್ರಭುರಾಯನಹುದೆಂದು/ತನ್ನೊಳಗೆ ನಿಶ್ಚೈಸಿ ನಿಜ ಸಂ/ಪನ್ನತೆಯಲಿರುತಿರ್ದನವನೀ/
ಮಾನ್ಯನೆಮ್ಮಯ ಬಸವದಂಡಾಧೀಶನರ್ತಿಯಲಿ (ಪ್ರಭು.ಲೀ.21-23)
ಬಸವದಂಡಾಧೀಶನು ತಾನು ನಿರ್ವಿುಸಿದ ಶೂನ್ಯಪೀಠವನ್ನು ಅವಲೋಕಿಸಿದ. ಇಂಥ ಪೀಠವನ್ನು ಆರೋಹಣ ಮಾಡುವುದಾದರೆ ಪ್ರಭುರಾಯನನ್ನು ಬಿಟ್ಟರೆ ಇನ್ನಾರಿಗೂ ಸಾಧ್ಯವಿಲ್ಲ. ಅಲ್ಲಮನು ಲೋಕಮಾನ್ಯತೆಯನ್ನು ಪಡೆದಿದ್ದಾನೆ. ಅವನು ನನ್ನ ಹೃದಯಕಮಲದ ಸೂರ್ಯನೇ ಆಗಿದ್ದಾನೆಂದು ಭಾವಿಸುತ್ತ ಅಲ್ಲಮನಿಗಾಗಿ ಬಸವಣ್ಣ ಕಾತರದಿಂದ ನಿರೀಕ್ಷಿಸುತ್ತಿದ್ದ. ಬಸವಣ್ಣನು ಶೂನ್ಯಪೀಠವನ್ನು ಅಮೂರ್ತತತ್ತ್ವದ ನೆಲೆಯಲ್ಲೂ ಮೂರ್ತತತ್ತ್ವದ ನೆಲೆಯಲ್ಲೂ ಅನೂಹ್ಯ ರೀತಿಯಿಂದ ನಿರ್ವಿುಸಿದ ನಂತರ ಹಲವು ರೀತಿಗಳಲ್ಲಿ ಯೋಚಿಸಿದ. ಕಣ್ಣುಗಳ ಎದುರು ಕತ್ತಲೆಯುಂಟು.
ಆ ಕತ್ತಲೆಯನ್ನು ಸೂರ್ಯನು ಮಾತ್ರ ನಿವಾರಿಸಬಹುದು. ದೇಹದೊಂದಿಗೆ ಸಹಜವಾಗಿ ಸೇರಿರುವ ‘ಮಾಯೆ ಎಂಬ ಕತ್ತಲೆಯನ್ನು ಹಿಂಗಿಸುವುದಾದರೆ ಅದು ಪ್ರಭುರಾಯನಿಂದ ಮಾತ್ರ ಸಾಧ್ಯ. ಒಳ-ಹೊರಗಿನ ಕತ್ತಲೆಯನ್ನು ನಿವಾರಿಸಲು ಗುರುಗುಹೇಶ್ವರನಿಂದ ಮಾತ್ರ ಸಾಧ್ಯ. ಉಳಿದವರಿಂದ ಸಾಧ್ಯವೇ? ಎಂದು ಅವನ ಬಳಿ ಬರುತ್ತಿದ್ದ ಶರಣರಿಗೆ ಬಸವಣ್ಣ ಹೇಳುತ್ತಿದ್ದ. ಆ ಶೂನ್ಯಪೀಠದ ಬಳಿಗೆ ಅನೇಕರು ಲೌಕಿಕದ ಲಾಭಕ್ಕಾಗಿ ಬರುತ್ತಿದ್ದರು. ಆದರೆ, ಶೂನ್ಯಪೀಠವನ್ನು ಪರೀಕ್ಷೆ ಮಾಡುವ ಪರಮಪುರುಷರನ್ನು ಕಾಣದೆ ಹೋದರು. ಈ ಆಶ್ಚರ್ಯಕ್ಕೆ ಏನು ಹೇಳುವುದು? ಶೂನ್ಯಪೀಠದ ಕುರುಹನ್ನು ಅದರ ದಾರಿಯನ್ನು ತಿಳಿದು ಪ್ರವೇಶ ಮಾಡುವವರು ಇನ್ನಾರಾದರೂ ಇದ್ದಾರೆಯೆ? ಭಕ್ತರಲ್ಲದ ಮದಿಸಿದ ಭವಿಗಳು ಶೂನ್ಯಪೀಠದ ವಿಸ್ತಾರವನ್ನು ಹೇಗೆ ತಾನೆ ಬಲ್ಲರು?- ಎಂದು ಅಲ್ಲಿಗೆ ಬರುತ್ತಿದ್ದ ಜ್ಞಾನಿಗಳು ಆಶ್ಚರ್ಯಗೊಳ್ಳುತ್ತಿದ್ದರು.
ಬಸವಣ್ಣನು ಸುಜ್ಞಾನ ಸಿಂಹಾಸನವನ್ನು ನಿರ್ವಿುಸಿದ. ಅದರ ಮರ್ಮವನ್ನು ಭವಿಗಳು ತಿಳಿಯಲಾರದೆ ಹೋದರು. ಭಕ್ತರು ಶೂನ್ಯಪೀಠದ ಭವ್ಯತೆಗೂ ದಿವ್ಯತೆಗೂ ಅಚ್ಚರಿಗೊಂಡರು. ಅಲ್ಲಿದ್ದ ಶರಣರು ಅಣ್ಣ ಬಸವಣ್ಣ ನಿರ್ವಿುಸಿದ ಶೂನ್ಯಪೀಠವನ್ನು ಏರುವ ಕ್ರಮವನ್ನು ತಿಳಿಯಲಾರದೆ ನಿಂತರು. ಆಗ ಬಸವಣ್ಣನು ಗುರುಗುಹೇಶ್ವರನಾದ ಅಲ್ಲಮನ ಬರುವಿಕೆಗಾಗಿ ಕಾಯುತ್ತಿದ್ದ, ಅವನಿಗಾಗಿ ತಪಿಸುತ್ತಿದ್ದ, ನಿರೀಕ್ಷಿಸುತ್ತಿದ್ದ.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು) (ಪ್ರತಿಕ್ರಿಯಿಸಿ:: vvsudina@gmail.com, mallepuram@gmail.com)