ನ್ಯೂಸ್

ಬಸವಣ್ಣನ ಬಗ್ಗೆ ಯತ್ನಾಳ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಖಂಡನೆ

Bengaluru - Political - Shivananda Tagadur

ಬೆಂಗಳೂರು:

ಬಸವಣ್ಣನವರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ಪ್ರಿಯಾಂಕ ಖರ್ಗೆ, ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿದ್ದಾರೆ.

ಯತ್ನಾಳ್ ಅವರು ಕ್ಷಮಿಸಲಾರದ ತಪ್ಪೆಸಗಿದ್ದಾರೆ. ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆಗಳು ಈಗ ಸಮಾಜ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ ಎಂದಿದ್ದಾರೆ.

ಬಸವಣ್ಣನವರ ಹಾಗೆ ಹೊಳೆ ಹಾರಬೇಕು ಎನ್ನುವ ಮೂಲಕ ಪಲಾಯನವಾದಿ ಎಂಬರ್ಥದಲ್ಲಿ ಮಾತನಾಡಿದ ಯತ್ನಾಳ್ ಅವರನ್ನು ಈ ನಾಡಿನ ಪ್ರಜ್ಞಾವಂತ ಬಸವಾನುಯಾಯಿಗಳು ಗಟ್ಟಿ ಧ್ವನಿಯಲ್ಲಿ ಖಂಡಿಸಬೇಕಿದೆ ಎಂದಿದ್ದಾರೆ.

ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂದಿದ್ದ ಬಸವಣ್ಣನವರ ಹೆಸರನ್ನು ಯತ್ನಾಳ್ ಅವರು ತಮ್ಮ ದ್ವೇಷ ಭಾಷಣಕ್ಕೆ ಬಳಸಿದ್ದು ಮತ್ತೊಂದು ಘೋರ ಅಪರಾಧ. ಬಸವಣ್ಣನವರು ಹೊಳೆ ಹಾರಿಲ್ಲ, ಈ ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ ಎಂದು ಹೇಳಿದ್ದಾರೆ.

ಬಸವಣ್ಣನವರು ಹೊಳೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು? ಯತ್ನಾಳ್ ಪ್ರತಿಪಾದಿಸುತ್ತಿರುವ ಸಿದ್ಧಾಂತವೇ ಅಂದು ಬಸವಾದಿ ಶರಣರನ್ನು ಹಿಂಸಿಸಿದ್ದಲ್ಲವೇ? ಕಲ್ಯಾಣದ ಶರಣರ ಹತ್ಯೆ ನಡೆಸಿದವರು ಯಾರು? ಶರಣರು ಮರಣವೇ ಮಹಾನವಮಿ ಎಂದಿದ್ದೇಕೆ? ವಚನ ಬಂಡಾರಕ್ಕೆ ಬೆಂಕಿ ಇಟ್ಟವರು ಯಾರು? ಅನುಭವ ಮಂಟಪಕ್ಕೆ ದಾಳಿ ಮಾಡಿದವರು ಯಾರು? ಮಡಿವಾಳ ಮಾಚಿದೇವರು ಕತ್ತಿ ಹಿಡಿದಿದ್ದೇಕೆ? ಯಾರಿಂದ ರಕ್ಷಣೆ ಪಡೆಯಲು? ಬಿಜೆಪಿಯವರಿಗೆ ಈ ವಿಚಾರಗಳ ಬಗ್ಗೆ ಚರ್ಚಿಸುವ ಶಕ್ತಿ ಇದೆಯೇ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಇಂದು ನಾವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದೇವೆ. ಅವರ ತತ್ವಗಳ ಪ್ರೇರಣೆಯಲ್ಲೇ ನಮ್ಮ ಸಂವಿಧಾನವಿದೆ. ಧಮನಿತರಿಗೆ ಆತ್ಮಶಕ್ತಿ ನೀಡಿದ, ಶೋಷಿತರಿಗೆ ಘನತೆಯ ಬದುಕು ತಂದುಕೊಟ್ಟ, ಕಲ್ಯಾಣ ಕ್ರಾಂತಿಯ ಮೂಲಕ ಮೌಢ್ಯದಲ್ಲಿ ಜಡಗಟ್ಟಿದ್ದ ಸಮಾಜಕ್ಕೆ ಹೊಸ ಮಾರ್ಗ ತೋರಿದ ಬಸವಣ್ಣನವರು ಕೇವಲ ಹೊಳೆ ಹಾರಿದವರಾಗಿ ಕಂಡಿದ್ದು ಬಿಜೆಪಿಗರ ಅಜ್ಞಾನದ ದ್ಯೋತಕವಾಗಿದೆ ಎಂದಿದ್ದಾರೆ.

ಬಸವಣ್ಣರನ್ನು ಅನುಸರಿಸುವ ಈ ನಾಡಿನ ಜನ ಬಿಜೆಪಿಗರ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ನಾಡಿನ ಜನ ವೇದಿಕೆಯಿಂದ ಕೆಳಗಿಳಿಸಿ ಓಡಿಸಿದ್ದರೂ ಬುದ್ದಿ ಕಲಿಯದ ಯತ್ನಾಳ್ ಅವರ ನಾಲಿಗೆಗೆ ಕಡಿವಾಣ ಹಾಕುವ ಶಕ್ತಿ ರಾಜ್ಯದ ಜನರಿಗಿದೆ ಎಂದು ಪ್ರಿಯಾಂಕ ಹೇಳಿದ್ದಾರೆ.