ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ ಮಲ್ಲಪ್ಪ ಸಿಂಹಾಸನರ ಪ್ರಥಮ ಪುಣ್ಯಸ್ಮರಣೆ ಆಚರಿಸಿ, ಅದರ ಕುರಿತು ಗ್ರಂಥ ಹೊರ ತಂದಿರುವುದು ಉತ್ತಮ ಕೆಲಸ ಎಂದು ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಭೀಮಶಿವ ಪ್ರಕಾಶನ, ನಂದಿ ಸಾಹಿತ್ಯ ವೇದಿಕೆ ಪ್ರಕಟಣೆಯ ‘ದಿವಂಗತ ಸಿಂಹಾಸನರ ಪ್ರಥಮ ಪುಣ್ಯಸ್ಮರಣೆಗೆ ನಾಂದಿ’ ಗ್ರಂಥವನ್ನು ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೃತಿ ಹೇಳುವಂತೆ ಸಿಂಹಾಸನರನ್ನು ಎಷ್ಟೇ ಕೊಂಡಾಡಿದರೂ ಸಾಲದು. ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಸಂದರ್ಭದಲ್ಲಿ ದಾನಿಗಳಿಂದ ಕಾಣಿಕೆ ಸಂಗ್ರಹಿಸುತ್ತಾರೆ. ತಾವೂ ದೇಣಿಗೆ ನೀಡಿಲ್ಲವೆಂದು ತಮ್ಮ ಹೆಸರನ್ನು ಶಿಲೆಯಲ್ಲಿ ಅಳವಡಿಸದೆ ಇದ್ದದ್ದು ಸಿಂಹಾಸನರ ದೊಡ್ಡ ಗುಣ. ವಿಜಯಪುರದ ಮನೆಯಿಂದಲೇ ಬುತ್ತಿ ತಂದು ಇವರು ಸಲ್ಲಿಸಿದ ಸೇವೆ ಮಾದರಿಯಾಗಿದೆ. ಬಸವೇಶ್ವರ ದೇವಸ್ಥಾನದ ಗರ್ಭಗುಡಿ ಸಾಗವಾನಿ ಜತೆಗೆ ಅದರ ಮೇಲೆ ಕೆತ್ತನೆಯ ಬೆಳ್ಳಿ ಅಳವಡಿಸಬೇಕು. ಸಿಂಹಾಸನರ ಕುರಿತು ನಾನಾ ಅಭಿವೃದ್ಧಿ ಕಾರ್ಯಗಳಾಗಬೇಕು ಎಂಬ ಬೇಡಿಕೆಗಳನ್ನು ನಂದಿ ಸಾಹಿತ್ಯ ವೇದಿಕೆ ಕೃತಿ ಮೂಲಕ ತೆರೆದಿಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಬಿ.ಕೆ.ಕಲ್ಲೂರ, ದಸಂಸ ಮುಖಂಡ ಅರವಿಂದ ಸಾಲವಾಡಗಿ, ಸಿಂದಗಿ ಅಂಜುಮನ್ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎಂ.ಡಿ.ಬಳಗಾನೂರ ಮಾತನಾಡಿದರು.
ಮಹಾಂತೇಶ ಸಂಗಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಮಾಜಿ ಅಧ್ಯಕ್ಷ ಆರ್.ಜಿ.ಅಳ್ಳಗಿ, ಸಾಹೇಬಗೌಡ ಕರಿಗೌಡರ, ಗೀತಾ ಘೋರ್ಪಡೆ ಪ್ರಾರ್ಥಿಸಿದರು. ಡಾ.ಮುರುಗೇಶ ಸಂಗಮ, ಡಾ.ಯುವರಾಜ ಮಾದನಶೆಟ್ಟಿ, ವಿ.ಬಿ.ಚಕ್ರಮನಿ, ಶಿವಾಜಿ ಮೋರೆ ಇತರರಿದ್ದರು.