ಬೆಳಗಾವಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದ ಪಂಚಮಸಾಲಿ ಸಮುದಾಯದ ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. 24 ಗಂಟೆ ಗಡುವು ನೀಡಿದ್ದೇವೆ, ಸಿಎಂ ಮೀಸಲಾತಿ ಕೊಡುತ್ತಾರೋ ಇಲ್ಲವೋ ಎಂಬುದನ್ನು ಹೇಳಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಾ, ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿ ಹೇಳಿದ್ದಾರೆ. ತಾಯಿ ಮೇಲೆ ಗೌರವ ಇದ್ದರೆ 24 ತಾಸಿನಲ್ಲಿ ಮೀಸಲಾತಿ ನೀಡುವ ಬಗ್ಗೆ ತಮ್ಮ ನಿರ್ಧಾರವನ್ನು ಹೇಳುತ್ತಾರೆ. ನಾವು ಧಮ್ಕಿ ಹಾಕಿ ಮೀಸಲಾತಿಯನ್ನು ಕೇಳುತ್ತಿಲ್ಲ. ಒಂದು ವೇಳೆ ಧಮ್ಕಿ ಹಾಕಲೇ ಬೇಕು ಎಂದು ನಿರ್ಧರಿಸಿದ್ದರೆ ಸುವರ್ಣಸೌಧಕ್ಕೆ ಹಾಕುತ್ತಿದ್ದೆವು. ಆದರೆ ನಾವು ಏನೂ ಮಾಡಿಲ್ಲ, ಹೀಗಿದ್ದರೂ ಧಮ್ಕಿ ಹಾಕಿದ್ದೇವೆ ಎಂದು ಅಪಪ್ರಚಾರ ಮಾಡುತ್ತೀರಾ ಎಂದು ಆಕ್ರೋಶ ಹೊರಹಾಕಿದರು.
ಯತ್ನಾಳ್ ಮಾತನಾಡುತ್ತಾ, ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ಟಾಂಗ್ ನೀಡಿದರು. ಮೀಸಲಾತಿ ಬಗ್ಗೆ ವರದಿ ಕೊಡುವ ಅಧಿಕಾರಿ ಪ್ರವಾಹ, ಕರೊನಾ ಎಂಬಿತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಅಡ್ಡಗಾಲು ಹಾಕಿದರು. ಇದರ ಹಿಂದೆ ಶಿಕಾರಿಪುರ ರಾಜ ಇದ್ದಾರೆ ಎಂಬುದು ಗೊತ್ತಿದೆ. ಎಷ್ಟು ದಿನ ಯಡಿಯೂರಪ್ಪ ಅವರ ಮಾತು ಕೇಳಿಕೊಂಡು ನಮಗೆ ಟೋಪಿ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿ ಅವರನ್ನು ನಂಬಬೇಡಿ ಎಂದು ಹಲವು ಜನರು ಹೇಳಿದರು. ಆದರೂ ನೀವು ತಾಯಿ ಮೇಲೆ ಆಣೆ ಮಾಡಿರುವ ಕಾರಣ ನಿಮ್ಮ ಮಾತಿಗೆ ಒಪ್ಪಿದೆವು. ಒಂದು ವೇಳೆ ಅಂದು ನಾವಂದುಕೊಂಡಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದೇ ಆಗಿದ್ದಲ್ಲಿ ಅವತ್ತೇ ನಿಮ್ಮ ಕೊನೆಯ ದಿನವಾಗುತ್ತಿತ್ತು ಎಂದು ಹೇಳಿದರು.