ನ್ಯೂಸ್

ಪಂಚಮಸಾಲಿಗಳಿಗೆ ಏಟು; ಲಿಂಗಾಯತರ ಟಾರ್ಗೆಟ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದ Basavajaya Mruthyunjaya Swamiji

ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿಗಳು ನಡೆಸುತ್ತಿರುವ  ಹೋರಾಟ ಹಿಂಸಾರೂಪ ಪಡೆದುಕೊಂಡಿದ್ದು, ಪೊಲೀಸರು ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿಚಾರ್ಜ್​ನಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಲಾಠಿಚಾರ್ಜ್​ಗೆ ಸಂಬಂಧಿಸಿದಂತೆ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji) ಪ್ರತಿಕ್ರಿಯಿಸಿದ್ದು, ಸಾರ್ವಜನಿಕರ ವೇಷದಲ್ಲಿ ಬಂದ ಪೊಲೀಸರೇ ನಮ್ಮವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji), ಪಂಚಮಸಾಲಿ ಸಮಾಜದವರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೆವು. ಸಾರ್ವಜನಿಕರ ವೇಷದಲ್ಲಿ ಬಂದ ಪೊಲೀಸರೇ ನಮ್ಮವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಮವಸ್ತ್ರದಲ್ಲಿದ್ದವರು ಲಾಠಿಚರ್ಜ್‌ ನಡೆಸಿದ್ದಾರೆ. ಇದು ವ್ಯವಸ್ಥಿತ ಷಡ್ಯಂತ್ರ. ಹೋರಾಟಗಾರರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರೇ ಕಲ್ಲು ತೂರಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ. ಸಾಲದೆಂಬಂತೆ ಕಲ್ಲು ತೂರಿದ ಆರೋಪವನ್ನೂ ನಮ್ಮವರ ಮೇಲೆ ಹೊರಿಸಿ, ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಶಾಂತ ರೀತಿಯ ‌ಹೋರಾಟ ಮಾಡಿದ್ದೇವೆ, ನ್ಯಾಯಯುತ ಹೋರಾಟಕ್ಕೆ ನಿರಂತರ ‌ಪ್ರಯತ್ನ ನಡೆಯುತ್ತಿದೆ. ಎಂದಿಗೂ ನಮ್ಮ ಜನ ಅಶಾಂತಿಗೆ ಅವಕಾಶ ಕೊಟ್ಟಿಲ್ಲ. ಹೋರಾಟ ನಿಯಂತ್ರಣ ತಪ್ಪುವ ಸಾಧ್ಯತೆ ಇದ್ದರೆ ಜಲಫಿರಂಗಿ ಬಳಸಬಹುದಿತ್ತು. ಲಾಠಿಚಾರ್ಜ್‌ ಮಾಡಲೇಬೇಕು ಎಂದು ಏಕೆ ನಿರ್ಧರಿಸಿದರು. ಸ್ವತಃ ಮುಖ್ಯಮಂತ್ರಿಯೇ ಲಾಠಿಚಾರ್ಜ್‌ಗೆ ಆದೇಶ ನೀಡಿದ್ದಾರೆ. ಅವರು ಆದೇಶ ನೀಡಿಲ್ಲ ಎಂದಾದರೆ ಸಂಬಂಧಿಸಿದ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಿ ಎಂದು ಆಗ್ರಹಿಸಿದ್ಧಾರೆ.

ಯಾವ ಸಿಎಂ ಸಹ ಮಾರಣಾಂತಿಕ ಹಲ್ಲೆ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಿಂಗಾಯತರ ಟಾರ್ಗೆಟ್ ಮಾಡುವ ಅವಶ್ಯಕತೆ ಇರಲಿಲ್ಲ. ಇದು ಸಮಾಜದ ಮೇಲಿನ ದೌರ್ಜನ್ಯವೇ ಸರಿ. ನಮ್ಮವರನ್ನೇ ಹೊಡೆದು ಅವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಎಲ್ಲರ ಮೇಲಿನ ಪ್ರಕರಣ ಹಿಂಪಡೆಯಬೇಕು. ಇಲ್ಲದಿದ್ದರೆ ಡಿ.16ರಂದು ಇಡೀ ದಿನ ಸುವರ್ಣ ವಿಧಾನಸೌಧದ ಎದುರಿನಲ್ಲಿ ಧರಣಿ ಮಾಡುತ್ತೇವೆ. ಮೀಸಲಾತಿ ಕೊಡಲು ಆಗಲ್ಲ ಎಂದು ಹೇಳಿದ್ರೆ, ನಾವು ಬೇರೆ ಮಾರ್ಗ ಹಿಡಿಯುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ (Basavajaya Mruthyunjaya Swamiji) ಎಚ್ಚರಿಸಿದ್ದಾರೆ.