ನ್ಯೂಸ್

ಇಂದು ಬಸವ ಜಯಂತಿ; ಕಾಯಕ ಬದುಕಿನ ನಾಯಕ

ಪರಿಶ್ರಮವಿಲ್ಲದೆ ಗಳಿಸಿದ ಹಣವು ಸಮಸ್ಯೆ ಸೃಷ್ಟಿಸುತ್ತ, ಬದುಕಿನ ಶಾಂತಿಯನ್ನು ಹಾಳು ಮಾಡುತ್ತದೆಂಬ ಅರಿವು ಶಿವಶರಣರಲ್ಲಿ ಇತ್ತು. ಅದಕ್ಕಾಗಿ ಅವರು ಹಣ, ಅಧಿಕಾರದ ಸಂಗಡ ಸಾಗದೆ ಆದರ್ಶದ ಜತೆ ಸಾಗಿದರು. ಆದರೆ ಇಂದಿನದು ಹಣಕ್ಕಾಗಿ ಆದರ್ಶ ತೊರೆಯುವ ಸನ್ನಿವೇಶ.
|ಡಾ. ಶಿವಮೂರ್ತಿ ಮುರುಘಾ ಶರಣರು

ವಚನ ಚಳವಳಿಯ ಧ್ಯೇಯವಾಕ್ಯ ವೆಂದರೆ, ಕಾಯಕವೇ ಕೈಲಾಸ. ವಚನಕಾರರೆಲ್ಲ ಬಹುತೇಕ ಒಂದೊಂದು ಕಾಯಕ ನಿರ್ವಹಿಸುವ ವರಾಗಿದ್ದರು. ಕೆಲಸ, ಕರ್ಮ, ಕ್ರಿಯೆಗೆ ಅವರು ಕಾಯಕ ಸ್ಪರ್ಶ ನೀಡಿದರು. ಕೆಲವರಿಗೆ ದೇವತಾ ಆರಾಧನೆ ಪೂಜನೀಯವೆಂದು ಕಂಡರೆ, ಕೆಲವರಿಗೆ ಧರ್ಮದ ಆರಾಧನೆ ಮತ್ತು ಅನುಸರಣೆ ಮುಖ್ಯ ಆಗಿರುತ್ತದೆ. 12ನೇ ಶತಮಾನದ ವಚನಕ್ರಾಂತಿಯನ್ನು ಅನ್ವೇಷಿಸಿದರೆ, ಧರ್ಮ ಮತ್ತು ದೇವತಾ ಆರಾಧನೆಗಿಂತ ಶರಣರಿಗೆ ಉತ್ಕೃಷ್ಟವಾಗಿ ಕಂಡಿದ್ದು ಕಾಯಕ. ದೈನಂದಿನ ಜೀವನ ಬಿಟ್ಟು ಕಾಯಕ ಇಲ್ಲ; ಕಾಯಕ ಹೊರತುಪಡಿಸಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಬಸವಾದಿ ಶರಣರು ಕಾಯಕವನ್ನು ದೇವರು ಮತ್ತು ಧರ್ಮಕ್ಕಿಂತ ಮಿಗಿಲೆಂದು ಭಾವಿಸುತ್ತಾರೆ; ಅದರಂತೆ ಆಚರಿಸುತ್ತಾರೆ. ತಮ್ಮ ಪಾಲಿನ ಕಾಯಕ ನಿರ್ವಹಿಸುತ್ತ ಅದರಲ್ಲಿ ಕೈಲಾಸ ಕಾಣುವ ದೃಷ್ಟಿ ನಿಜವಾಗಿಯೂ ವಿಶಿಷ್ಟ.

ಇಂದು ನಿರ್ವಹಿಸುತ್ತಿರುವ ಕೆಲಸಗಳು ಭ್ರಷ್ಟಗೊಂಡಿರುವುದರಿಂದ ಅವುಗಳನ್ನು ಕಾಯಕವೆಂದು ಪರಿಗಣಿಸಲು ಆಗುವುದಿಲ್ಲವೇನೋ! ಇಂದಿನ ದುಡಿಮೆಯಲ್ಲಿ ದುರಾಸೆ ಸೇರಿಕೊಂಡಿದೆ. ಲಂಚಗುಳಿತನ ತಾಂಡವ ಆಡುತ್ತಿದೆ. ಮೋಸ ವಂಚನೆ ಎಲ್ಲೆ ಮೀರಿದೆ. ‘ಹೇಗಾದರು ಮಾಡು ಹಣ ಮಾಡು’ ಎಂಬ ಧನಲೋಭ. ಲಾಭಕ್ಕಾಗಿ ಏನೆಲ್ಲ ಲೋಭ. ಜನರು ಧನಾಗಮನ ನೋಡುತ್ತಾರೆಯೇ ಹೊರತು, ಅದರ ಆಗಮನದ ಬಗೆಗೆ ಅಷ್ಟಾಗಿ ಚಿಂತಿಸುವುದಿಲ್ಲ. ಬಸವಣ್ಣನವರು ಒಬ್ಬ ವ್ಯಾಪಾರಿ, ಭಕ್ತಿಭಂಡಾರಿ, ಕ್ರಾಂತಿಕಾರಿ. ತಮ್ಮ ಬದುಕಿನ ಬದ್ಧತೆಯನ್ನು ಹೀಗೆ ಅಭಿವ್ಯಕ್ತಿಸುತ್ತಾರೆ-

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,

ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.

ಒಮ್ಮನವಾದಡೆ ಒಡನೆ ನುಡಿವನು,

ಇಮ್ಮನವಾದಡೆ ನುಡಿಯನು.

ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,

ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ.

ಕಾಣಿಯ ಲೋಭವು, ಕೋಟಿ ಲಾಭಕ್ಕೆ ಪ್ರಚೋದಿಸುತ್ತದೆ. ಪರಿಶ್ರಮವಿಲ್ಲದೆ ಗಳಿಸಿದ ಹಣವು ಒಂದಿಲ್ಲೊಂದು ಸಮಸ್ಯೆ ಸೃಷ್ಟಿಸುತ್ತ, ಬದುಕಿನ ಶಾಂತಿಯನ್ನು ಹಾಳು ಮಾಡುತ್ತದೆಂಬ ಅರಿವು ಶಿವಶರಣರಲ್ಲಿ ಇತ್ತು. ಅದಕ್ಕಾಗಿ ಅವರು ಹಣ, ಅಧಿಕಾರ, ಆಸ್ತಿಯ ಸಂಗಡ ಸಾಗಲಿಲ್ಲ. ಬದಲಾಗಿ ಆದರ್ಶದ ಜತೆ ಸಾಗುತ್ತ, ಇತಿಹಾಸ ನಿರ್ವಿುಸುತ್ತಾರೆ. ಆದರ್ಶ ತೊರೆಯುವ ಸನ್ನಿವೇಶ ಇಂದಿನದಾದರೆ, ಆದರ್ಶಕ್ಕಾಗಿ ಸರ್ವವನ್ನು ತೊರೆದು ಶರಣರೆನಿಸಿಕೊಂಡದ್ದು 12ನೇ ಶತಮಾನದ ವಿರಳ ಸಂದರ್ಭ.

ಜೀವನದಲ್ಲಿ ಕೃತಕೃತ್ಯತೆ ಪಡೆಯಬೇಕೆಂದು ಒಂದಿಲ್ಲೊಂದು ಕೃತ್ಯ(ಕೃತಿ) ನಿರ್ವಹಿಸಿದರು. ಸತ್ಕೃತಿಗೆ ಸು-ಮತಿ ಬೇಕು; ಕಾಯಕದಲ್ಲಿ ಗತಿ ಇದೆ: ಮತಿ ಇದೆ: ಸದ್ಗತಿ ಇದೆ. ಇದುವೆ ಕಾಯಕ ಸಂಸ್ಕೃತಿ: ಶರಣಸಂಸ್ಕೃತಿ. ಕಾಯಕ್ಕೆ ಕಷ್ಟ(ಶ್ರಮ) ಕೊಡದವರನ್ನು ಕಾಳವ್ವೆ ಎಂಬ ಶರಣೆ-

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;

ಸತ್ಯಶುದ್ಧವಿಲ್ಲದುದು ಕಾಯಕವಲ್ಲ.

ಎಂದು ವಿಡಂಬಿಸಿದ್ದಾಳೆ. ಮೇಲೆ ಪ್ರಸ್ತಾಪಿಸಿದಂತೆ ಶಿವಶರಣರ ಪ್ರಥಮ ಆದ್ಯತೆಯೆಂದರೆ ಕಾಯಕ. ಅದಕ್ಕೆ ಪೂರಕವಾದ ಸಂದರ್ಭ- ಇತರೆ ಶರಣರಂತೆ ಆಯ್ದಕ್ಕಿ ಮಾರಯ್ಯನು ಅನುಭಾವ ಪ್ರಸಂಗಕ್ಕೆ ಹಾಜರಾಗುತ್ತಾನೆ. ತನ್ಮಯನಾಗಿ ಸಂವಾದ ಆಲಿಸುತ್ತ ಕೂರುತ್ತಾನೆ. ಆಲಿಸುವಿಕೆಯಲ್ಲಿ ತನ್ಮಯತೆ ಇರಬೇಕಾಗುತ್ತದೆ. ವಿದ್ಯಾರ್ಥಿಗಳು ಪಾಠ ಪ್ರವಚನವನ್ನು ತನ್ಮಯರಾಗಿ ಕೇಳಿಕೊಳ್ಳಬೇಕಾಗುತ್ತದೆ. ಅಂದರೆ ಮಾತ್ರ ಪಾಠವು ಅವರಿಗೆ ಒಲಿಯುತ್ತದೆ. ಶಿವಶರಣರ ಶಿವಾನುಭವ ಪ್ರಸಂಗವು ಸಂವಾದದಿಂದ ಕೂಡಿದುದಾಗಿದ್ದು, ಅಲ್ಲಮನ ಅಧ್ಯಕ್ಷತೆಯಲ್ಲಿ ಗೋಷ್ಠಿ ನಡೆದಿರುತ್ತದೆ. ತನ್ನ ಪತಿ ಎಷ್ಟೊತ್ತಾದರೂ ಬಾರದಿರುವುದನ್ನು ಗಮನಿಸಿದ ಆಯ್ದಕ್ಕಿ ಲಕ್ಕಮ್ಮ ನೇರವಾಗಿ ಅನುಭವ ಮಂಟಪಕ್ಕೆ ಬರುತ್ತಾಳೆ. ಅನುಭವದಲ್ಲಿ ಮಗ್ನನಾದ ಪತಿ ಆಯ್ದಕ್ಕಿ ಮಾರಯ್ಯನ ಬಳಿ ಬಂದ ಆಕೆ-

ಕಾಯಕ ನಿಂದಿತ್ತು, ಹೋಗಯ್ಯಾ ಎನ್ನಾಳ್ದನೆ/ ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು/ ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ/ ಬೇಗ ಹೋಗು ಮಾರಯ್ಯಾ.

ಎಂದು ಎಚ್ಚರಿಸುತ್ತಾಳೆ. ಕೆಲವರು ಮಾಡುವ ಕೆಲಸವನ್ನು ಬಿಟ್ಟು, ಆಲಿಸುತ್ತ ಹೋಗುತ್ತಾರೆ. ಇನ್ನು ಕೆಲವರು ಭಜನೆ, ಪ್ರಾರ್ಥನೆ, ಯೋಗಾಸನದಲ್ಲಿ ಕಾಲ ಕಳೆಯುತ್ತಾರೆ. ಇನ್ನು ಕೆಲವರು ಸೋಮಾರಿ ಕಟ್ಟೆಯ ಮೇಲೆ ಕುಳಿತು ದಿನಗಟ್ಟಲೆ ಹರಟುತ್ತಾರೆ. ಮಾನವ ಶಕ್ತಿಯು ಹೀಗೆ ಅಪವ್ಯಯ ಆಗುತ್ತದೆಂಬ ಕಾಳಜಿ ಕಾಣುವುದಿಲ್ಲ. ಅನುಭಾವಕ್ಕಿಂತ ಪ್ರಥಮ ಆದ್ಯತೆ ಕಾಯಕ. ನಂತರದ ಆದ್ಯತೆ ದಾಸೋಹ. ಕಾಯಕ ನಿರ್ವಹಣೆಯಿಂದ ಕಾಂಚಾಣ ಪ್ರಾಪ್ತಿ. ಅದು ಕೂಡುತ್ತ ಹೊರಟಂತೆ ಮಾನವನೊಳಗೆ ಅಹಂಕಾರವೆಂಬ ಸರ್ಪ ತೊನೆದಾಡುತ್ತದೆ. ಶಿವಶರಣರು ಧನದಾಹದ ನಿವಾರಣೆಗೆ ಕಂಡುಕೊಂಡಂತಹ ಮಾರ್ಗವೆ ದಾಸೋಹ. ಬಸವಣ್ಣನವರು-

ಜನ್ಮ ಜನ್ಮಕ್ಕೆ ಹೋಗಲೀಯದೆ,

‘ಸೋಹಂ’ ಎಂದೆನಿಸದೆ ‘ದಾಸೋಹಂ’ ಎಂದೆನಿಸಯ್ಯಾ.

ಲಿಂಗಜಂಗಮ ಪ್ರಸಾದದ ನಿಲವ ತೋರಿ ಬದುಕಿಸಯ್ಯಾ

ಕೂಡಲಸಂಗಮದೇವಾ

ಅನ್ನುತ್ತಾರೆ. ತನಗೆ ಯಾವ ಜನ್ಮವೂ ಬೇಡ. ಈ ಜನ್ಮದಲ್ಲೆ ದಾಸೋಹ ಎಸಗುವ ಸಂದರ್ಭವನ್ನು ಕರುಣಿಸು. ದಾಸೋಹದಲ್ಲಿ ಧನ್ಯತೆ ಇದೆ. ದಾಸೋಹವು ಅಬಲರು, ದುರ್ಬಲರು ಮತ್ತು ಅಸಹಾಯಕರ ಸೇವೆಗೆ ಸಲ್ಲಿಸುವ ಮಾರ್ಗ. ತನ್ಮೂಲಕ ಸಮ ಸಮಾಜ. ದುಡಿಯುವುದು ತನಗಾದರು ಅದರ ಫಲ ಸರ್ವರಿಗೆ ಎಂಬ ಸಮಷ್ಟಿಪ್ರಜ್ಞೆ ದಾಸೋಹದಲ್ಲಿದೆ. ಅದರಿಂದ ಬದುಕು ಸಾರ್ಥಕ ಎಂಬುದನ್ನು ಶರಣರು ಅರಿತಿದ್ದರು. ಮೂರನೆಯ ಆದ್ಯತೆಯೆಂದರೆ, ಅನುಭಾವ. ಬದುಕು ಅನುಭವಮುಖಿ ಆಗಬೇಕಾಗುತ್ತದೆ. ದೈನಂದಿನ ಬದುಕಿನಲ್ಲಿ ದಿನವು ಬಗೆಬಗೆ ಅನುಭವ. ಉಂಟಾದ ಅನುಭವವನ್ನು ಪ್ರಸ್ತಾಪಿಸುವುದು ಅಥವಾ ಪ್ರಸ್ತುತಪಡಿಸುವುದು ಅನುಭಾವ. ಅನುಭಾವವು ಶಿವಶರಣರ ಅಭಿವ್ಯಕ್ತಿ.

(ಲೇಖಕರು ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರು)